
ರಾಮದುರ್ಗ: ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ತುರ್ತಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಸಬೇಕೆಂದು ರಾಮದುರ್ಗ ಶಾಸಕರು ಮತ್ತು ವಿಧಾನಸಭೆಯ ಮುಖ್ಯ ಸಚೇತಕರಾದ ಮಾನ್ಯ ಅಶೋಕ ಪಟ್ಟಣ ಅವರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಉನ್ನತ ಶಿಕ್ಷಣ ಸಚಿವರಾದ ಡಾ ಎಂ ಸಿ ಸುಧಾಕರ್ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆಂದು ಅತಿಥಿ ಉಪನ್ಯಾಸಕರ ಮುಖಂಡ ಡಾ. ರಾಜು ಕಂಬಾರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾ ಪ್ರಕಟಣೆ ನೀಡಿದ ಕಂಬಾರರು, ಶಾಸಕರು ಮತ್ತು ಮುಖ್ಯ ಸಚೇತಕರಾದ ಸನ್ಮಾನ್ಯ ಅಶೋಕ ಪಟ್ಟಣ ಸರ್ ಅವರಿಗೆ ಶುಕ್ರವಾರ ಅತಿಥಿ ಉಪನ್ಯಾಸಕರ ನಿಯೋಗ ಭೇಟಿ ಮಾಡಿ ಪ್ರಸಕ್ತ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ- ಪ್ರವಚನಗಳು ನಡೆಯುತ್ತಿಲ್ಲ, ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ ಹಾಗೆಯೇ ಕಳೆದ ಎರಡು ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಉದ್ಯೋಗವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಆದುದರಿಂದ ಪ್ರಸಕ್ತ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ತುರ್ತಾಗಿ ನಡೆಯಬೇಕೆಂದು ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರ ಪರವಾಗಿ ಮಾಡಲಾಗಿತ್ತು ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರ ಮನವಿಗೆ ಸ್ಪಂದಿಸಿದ ಮುಖ್ಯ ಸಚೇತಕರು ಶನಿವಾರ ಪತ್ರ ಬರೆದು,ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಕಳೆದ 10-15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಯುಜಿಸಿ ಅರ್ಹ ಯುಜಿಸೇತರ ಆನರ್ಹ ಎಂಬ ಗೊಂದಲದಲ್ಲಿ ಸರ್ಕಾರ ಸಿಲುಕಿದ್ದು, ಈ ಪ್ರಕರಣವು ನ್ಯಾಯಲಯದಲ್ಲಿದೆ. ಈ ಪ್ರಕರಣದಿಂದ ಅತಿಥಿ ಉಪನ್ಯಾಸಕರು ಜೀವನ ಸಾಗಿಸುವುದು ಕೂಡಾ ಸಂಕಷ್ಟದಲ್ಲಿದೆ. ಕೆಲವು ಉಪನ್ಯಾಸಕರು ಹೃದಯಾಘಾತದಿಂದ ಕೂಡಾ ನಿಧನ ಹೊಂದಿದ್ದಾರೆ. ಅವರ ಕುಟುಂಬಗಳು ಇಂದು ಅನಾಥವಾಗಿವೆ. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಅತಿಥಿ ಉಪನ್ಯಾಸಕರನ್ನು ಆಗಸ್ಟ್ 2 ರಂದು ಸೇವೆಯಿಂದ ಬಿಡುಗಡೆಗೊಳಿಸಿದ್ದಾರೆ ಎಂದು ಶಾಸಕರು ಕಳಕಳಿ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ 2025-26ನೇ ಶೈಕ್ಷಣಿಕ ವರ್ಷ ಆರಂಭಗೊಂಡು ಒಂದುವರೆ ತಿಂಗಳು ಕಳೆದಿದೆ. ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆ ಇಲ್ಲದೆ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠಗಳ ಭೋಧನೆ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣದಿಂದ ಕುಂಠಿತಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಯಾವ ಕಾಲೇಜಿನಲ್ಲಿಯೂ ಕೂಡಾ ಪ್ರಥಮ ಕಿರು ಪರೀಕ್ಷೆಗಳು ನಡದೆ ಇಲ್ಲ. ಪರೀಕ್ಷೆಗಳು ನಡೆಯಬೇಕೆಂದರೆ ಪಠ್ಯಕ್ರಮಗಳು ಆರಂಭವಾಗಿಲ್ಲವೆಂದ ಶಾಸಕರು,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2025-26ನೇ ಸಾಲಿನಲ್ಲಿ ಯುಜಿಸಿ ಅರ್ಹ ಮತ್ತು ಯುಜಿಸೇತರ ಅನರ್ಹ ಎನ್ನದೆ ಈ ಹಿಂದೆ ಸೇವೆ ಸಲ್ಲಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಕೋರಿದ್ದಾರೆಂದು ತಿಳಿಸಿದ್ದಾರೆ.