ಅಯೋಧ್ಯೆಯಲ್ಲಿ ಕರ್ನಾಟಕದ ತಿಂಡಿಗಳ ಸವಿ ಉಣಬಡಿಸಲಿರುವ ಅದಮ್ಯ ಚೇತನ

WhatsApp Group Join Now

  • ಅಯೋಧ್ಯೆಯಲ್ಲಿ ಅಡುಗೆ ಮನೆ ಸಜ್ಜುಗೊಳಿಸಿ ದಿನಕ್ಕೆ 1000 ಪ್ಲೇಟ್ ಆಹಾರ ನೀಡಲಿದೆ
  • ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಭಾಗಿಯಾಗಲಿರುವ ಡಾ. ತೇಜಸ್ವಿನಿ ಅನಂತಕುಮಾರ್‌ ಹಾಗೂ ವಿಜೇತ ಅನಂತಕುಮಾರ್‌

ಬೆಂಗಳೂರು ಜನವರಿ 19: ಹಸಿರು ಮತ್ತು ಶೂನ್ಯ ತ್ಯಾಜ್ಯ ಅಡುಗೆ ಮನೆಯ ಖ್ಯಾತಿಯನ್ನ ಹೊಂದಿರುವ, ದಿನ ನಿತ್ಯ ಲಕ್ಷಾಂತರ ಮಕ್ಕಳ ಹಸಿವನ್ನ ನೀಗಿಸುತ್ತಿರುವ ಅದಮ್ಯ ಚೇತನ ಸಂಸ್ಥೆ, ಜನವರಿ 22 ರಿಂದ ಒಂದು ತಿಂಗಳುಗಳ ಕಾಲ ಅಯೋಧ್ಯೆಗೆ ಭೇಟಿ ನೀಡುವ ಭಕ್ತಾದಿಗಳಿಗೆ ತಾತ್ಕಾಲಿಕವಾಗಿ ನಿರ್ಮಿಸುತ್ತಿರುವ ಶೂನ್ಯ ತ್ಯಾಜ್ಯ ಅಡುಗೆ ಮನೆಯ ಮೂಲಕ ಕರ್ನಾಟಕದ ಖಾದ್ಯಗಳ ಸವಿಯನ್ನು ಉಣಬಡಿಸಲಿದೆ.

ಅದಮ್ಯ ಚೇತನ ಅಡುಗೆ ಮನೆಯ 16 ಜನರ ತಂಡ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿರುವ ಭಕ್ತಾದಿಗಳಿಗೆ ಒಂದು ತಿಂಗಳುಗಳ ಕಾಲ ಕರ್ನಾಟಕದ ತಿಂಡಿಗಳಾದ ಇಡ್ಲಿ, ಸಾಂಬಾರ್‌ ಉಪ್ಪಿಟ್ಟು, ಮಧ್ಯಾಹ್ನ ಬಿಸಿಬೇಳೆ ಬಾತ್‌ ಹಾಗೂ ಸಿಹಿ ಪೊಂಗಲ್‌, ರಾತ್ರಿ ಖಾರಾ ಪೊಂಗಲ್‌ ಉಣಬಡಿಸುವ ತಯಾರಿಯನ್ನು ಮಾಡಿಕೊಂಡಿದೆ.

ರಾಮನ ದೇವಸ್ಥಾನದ ಹತ್ತಿರದಲ್ಲಿಯೇ ತಾತ್ಕಾಲಿಕ ಅಡುಗೆ ಮನೆಯನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ಅದಮ್ಯ ಚೇತನ ಸಂಸ್ಥೆಯ ಎರಡು ವಾಹನಗಳು ಅಗತ್ಯ ಪರಿಕರಗಳೊಂದಿಗೆ ಈಗಾಗಲೇ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿವೆ. 16 ಜನರ ತಂಡವೂ ಅಯೋಧ್ಯೆಗೆ ರೈಲಿನಲ್ಲಿ ತೆರಳಿದ್ದು ತಾತ್ಕಾಲಿಕ ಅಡುಗೆ ಮನೆಯ ಸ್ಥಾಪಿಸಲಿದ್ದಾರೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಪ್ರತಿ ಒಂದು ಹೊತ್ತು ಸುಮಾರು 400 ಜನರಿಗೆ ಕರ್ನಾಟಕ ರಾಜ್ಯದ ತಿಂಡಿಗಳು, ಮಧ್ಯಾಹ್ನ ಬಿಸಿಬೇಳೆ ಬಾತ್‌ ಜೊತೆಗೆ ಒಂದು ಸಿಹಿ ಪದಾರ್ಥ ಹಾಗೂ ರಾತ್ರಿ ಖಾರ ಪೊಂಗಲ್‌ ಅಥವಾ ಚಿತ್ರನ್ನದಂತಹ ತಿಂಡಿಗಳನ್ನ ತಯಾರಿಸಿ ಬಡಿಸಲಾಗುವುದು. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಂಧರ್ಭದಲ್ಲಿ ಬರುವ ಭಕ್ತಾದಿಗಳಿಗೆ ಅಳಿವು ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನಮ್ಮ ಸಂತಸವನ್ನ ಇಮ್ಮಡಿಗೊಳಿಸಿದೆ. ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಆಹ್ವಾನ ದೊರೆತಿದ್ದು ಜನವರಿ 20 ರಂದು ಅಯೋಧ್ಯೆಗೆ ತೆರಳುತ್ತಿದ್ದಾರೆ ಎಂದು ಅದಮ್ಯ ಚೇತನ ಟ್ರಸ್ಟಿಗಳಾದ ಪ್ರದೀಪ್ ಓಕ್ ತಿಳಿಸಿದರು.

ಶೂನ್ಯ ತ್ಯಾಜ್ಯ ವ್ಯವಸ್ಥೆ :
ಬೆಂಗಳೂರಿನಲ್ಲಿ ಇರುವಂತೆಯೇ ಅಯೋಧ್ಯೆಯಲ್ಲೂ ಅದಮ್ಯ ಚೇತನ ತನ್ನ ತಾತ್ಕಾಲಿಕ ಅಡುಗೆ ಮನೆಯನ್ನು ಶೂನ್ಯ ತ್ಯಾಜ್ಯ ಅಡುಗೆ ಮನೆಯಾಗಿ ನಿರ್ಮಿಸಲಿದೆ. ತರಕಾರಿಗಳ ತ್ಯಾಜ್ಯ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಕಾಂಪೋಸ್ಟ್ ಮಾಡುವ ಯೂನಿಟ್ ಅನ್ನು ಜೊತೆಗೆ ಕೊಂಡೊಯ್ಯಲಾಗಿದೆ. ಇನ್ನು ಪ್ಲೇಟ್ ಬ್ಯಾಂಕಿನ ಪ್ಲೇಟುಗಳು ಹಾಗೂ ಚಮಚಗಳನ್ನು ತೆಗೆದುಕೊಂಡು ಕೊಂಡೊಯ್ಯಲಾಗಿದೆ. ಊಟದ ನಂತರ ಅವುಗಳನ್ನು ತೊಳೆಯಲು ಡಿಶ್ ವಾಶರ್ ಕೂಡ ಇಲ್ಲಿಂದಲೇ ತಗೆದುಕೊಂಡು ಹೋಗಲಾಗಿದೆ.

ಅಗತ್ಯ ಸಾಮಗ್ರಿಗಳನ್ನು ತಗೆದುಕೊಂಡು ಹೋಗುತ್ತಿರುವ ಎರಡು ವಾಹನಗಳು ನಾಳೆ ಅಯೋಧ್ಯೆ ತಲುಪಲಿವೆ. ಒಂದು ತಂಡ ಈಗಾಗಲೇ ತಾತ್ಕಾಲಿಕ ಅಡುಗೆ ಮನೆಯನ್ನ ಸ್ಥಾಪಿಸುವ ಕೆಲಸದಲ್ಲಿ ನಿರತವಾಗಿದೆ. ಜನವರಿ 22 ರ ಬೆಳಗ್ಗಿನಂದಲೇ ಅದಮ್ಯ ಚೇತನ ಅಡುಗೆ ಮನೆ ಕಾರ್ಯ ಪ್ರಾರಂಭಿ ಸಲಿದೆ ಎಂದು ಪ್ರದೀಪ್ ಓಕ್ ತಿಳಿಸಿದರು.

About The Author