ಧಾರವಾಡ ಉದ್ಯೋಗ ಮೇಳ ಯಶಸ್ವಿಗೊಳಿಸಲು ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಜಿಲ್ಲಾ ಪಂಚಾಯತ ಸಿಇಓ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗಮೇಳದ ವಿವಿಧ ಕಾರ್ಯಗಳಿಗೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಗಳು ತಮಗೆ ವಹಿಸಿದ ಕಾರ್ಯಗಳನ್ನು ಶಿಸ್ತುಬದ್ದವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾರೇ ನಿರ್ಲಕ್ಷ್ಯ, ಉದಾಸೀನತೆ ತೋರಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ದಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಉದ್ಯೋಗ ಮೇಳ ಯಶಸ್ವಿ ಆಯೋಜನೆಗಾಗಿ ನೇಮಿಸಿರುವ ವಿವಿಧ ಸಮಿತಿಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿ, ಸಿಬ್ಬಂದಿಗಳ ಸಭೆ ಜರುಗಿಸಿ, ಮಾತನಾಡಿದರು.
ಕೆಸಿಡಿ ಆವರಣದಲ್ಲಿನ ವಿ.ಕೃ.ಗೋಕಾಕ ಗ್ರಂಥಾಲಯ, ಪಿ.ಜಿ.ಕಾಲೇಜು, ಟೂರಿಸಂ ಕಾಲೇಜು, ಬಿ.ಬಿ.ಎ-ಬಿಸಿಎ ಕಾಲೇಜು, 24/7 ಗ್ರಂಥಾಲಯ ವಾಚನಾಲಯ ಸೇರಿ 6 ಬ್ಲಾಕ್ ಮಾಡಲಾಗಿದೆ. ಪ್ರತಿ ಬ್ಲಾಕ್ ಗೆ ನೋಡಲ್ ಆಫೀಸರ್, ಸಹಾಯಕ ನೋಡಲ್ ಆಫೀಸರ್ ನೇಮಿಸಲಾಗಿದೆ.
ಹೆಲ್ಪ್ ಡೆಸ್ಕ್ ಗಳನ್ನು ಮಾಡಲಾಗಿದೆ. ಇಲ್ಲಿ ನೇಮಕಗೊಂಡಿರುವ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯಗಳನ್ನು ಶಿಸ್ತುಬದ್ದವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಉದ್ಯೋಗ ಮೇಳದಲ್ಲಿ 120 ಉದ್ಯೋಗದಾತರ 262 ಜನ ಸಿಬ್ಬಂದಿಗಳು ಸಂದರ್ಶನ ತೆಗೆದುಕೊಳ್ಳಲು ಭಾಗವಹಿಸಲಿದ್ದಾರೆ.
ಮಾರ್ಚ್ 7 ರ ಬೆಳಿಗ್ಗೆಯವರೆಗೆ ವಿವಿಧ ಕೈಗಾರಿಕೆಗಳು ಎಂ.ಬಿ.ಎ., ಬಿಇ, ಐಟಿಐ ಮತ್ತು ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ, ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪಾಸಾದವರು ಹಾಗೂ ವಿಶೇಷಚೇತನ ವ್ಯಕ್ತಿಗಳು ಸೇರಿದಂತೆ 12,145 ಜನರ ಮಾನವ ಸಂಪನ್ಮೂಲ ಪೂರೈಕೆಗೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಉದ್ಯೋಗಮೇಳದಲ್ಲಿ ಭಾಗವಹಿಸಲು
ಈಗಾಗಲೇ ಮಾರ್ಚ್ 7 ರ ಬೆಳಿಗ್ಗೆಯವರೆಗೆ
ಆನ್ ಲೈನ್ ಮೂಲಕ 1190 ಎಸ್.ಎಸ್.ಎಲ್.ಸಿ, 730 ಪಿಯುಸಿ, 430 ಬಿಎ, 507 ಬಿ.ಕಾಂ, 128 ಬಿಎಸ್.ಸಿ, 2153 ಐಟಿಐ, 79 ಬಿಇ, 343 ಡಿಪ್ಲೋಮಾ, 55 ಬಿಬಿಎ, 62 ಬಿಸಿಎ, 47 ಎಂ.ಎ, 12 ಎಂಎಸ್ .ಡಬ್ಲೂ, 45 ಎಂಎಸ್.ಸಿ, 48 ಎಂಬಿಎ, 35 ಎಂ.ಕಾಂ. ಹಾಗೂ 398 ಇತರರು ಸೇರಿ ಒಟ್ಟು 6262 ಜನ ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿ ಕೊಂಡಿದ್ದಾರೆ. ಇವರಿಗೆ ಅಗತ್ಯ ಮಾಹಿತಿ ನೀಡಿ, ಉದ್ಯೋಗದಾತರೊಂದಿಗೆ ಉತ್ತಮ ರೀತಿಯಲ್ಲಿ ಸಂಯೋಜನೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಪ್ರತಿ ಬ್ಲಾಕ್ ಗೆ ಅಧಿಕಾರಿ ಹಾಗೂ ಸಹಾಯಕ ಸಿಬ್ಬಂದಿ ನೇಮಿಸಲಾಗಿದೆ. ಕರ್ತವ್ಯಗಳನ್ನು ಹಂಚಲಾಗಿದೆ. ಅಗತ್ಯ ಶೌಚಾಲಯ, ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಕರ್ತವ್ಯದಲ್ಲಿರುವವರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಉದ್ಯೋಗಮೇಳದ ನೋಡಲ್ ಅಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ಶಾಲಂ ಹುಸೇನ,
ಸಹಾಯಕ ಪೊಲೀಸ ಆಯುಕ್ತ ಪ್ರಶಾಂತ ಸಿದ್ದನಗೌಡರ, ಸಿಪಿಐ ದಯಾನಂದ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ, ತಹಶಿಲ್ದಾರ ಡಿ.ಎಚ್.ಹೂಗಾರ, ಜಿಲ್ಲಾ ಕೌಶಲ್ಯ ಅಧಿಕಾರಿ ರವೀಂದ್ರ ದ್ಯಾಬೇರಿ, ಸಹಾಯಕ ನಿರ್ದೇಶಕ ರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯತ ಇಓ ಅವರು, ವಿವಿ ಮತ್ತು ವಿವಿಧ ಸರಕಾರಿ ಕಾಲೇಜು, ಐಟಿಐಗಳ ಪ್ಲೇಸಮೆಂಟ್ ಅಧಿಕಾರಿಗಳು, ಪಿಡಿಓಗಳು ಭಾಗವಹಿಸಿದ್ದರು.