ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಂಗೋಳ್ಳಿ ರಾಯಣ್ಣ ಸರ್ಕಲ್‌ನಿಂದ ಪ್ರಾರಂಭವಾದ ಸಂತ ಶ್ರೇಷ್ಠ ಕನಕದಾಸರ 537 ನೇ ಜಯಂತ್ಯೋತ್ಸವ, ಡೊಳ್ಳೋತ್ಸವ ಹಾಗೂ ಕುಂಭಮೇಳ ಮೆರವಣಿಗೆಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ ಬಾಂಧವರು ಕನಕದಾಸರ ತತ್ವಗಳನ್ನು ಜೀವನದಲ್ಲಿ ಅಳವಡಿಕೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜದ ಬೇಡಿಕೆಗಳಿಗೆ ತಮ್ಮ ಕೈಲಾದಷ್ಟು ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಸಮಾಜದ ಆರ್ಥಿಕವಾಗಿ ಉಳ್ಳವರು ಹಿಂದುಳಿದ ಕುಟುಂಬಗಳನ್ನು ಮೇಲೆತ್ತುವಲ್ಲಿ ಮುಂದಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉನ್ನತ ಸ್ಥಾನಕ್ಕೆರೆಸುವಲ್ಲಿ ಮುಂದಾಗಬೇಕು. ಕನಕದಾಸರ ಹಿತ ಚಿಂತನೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕುಂಭಮೇಳ, ಡೊಳ್ಳು ಕುಣಿತ, ವಿವಿಧ ವಾಧ್ಯಮೇಳದೊಂದಿಗೆ ಪ್ರಾರಂಭವಾದ ಕನಕದಾಸರ ಭಾವಚಿತ್ರದ ಮೆರವಣಿಗೆ ಸಂಗೋಳ್ಳಿ ರಾಯಣ್ಣ ಸರ್ಕಲ್‌ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುರಸಭೆ ಸಾಂಸ್ಕೃತಿಕ ಭವನಕ್ಕೆ ಆಗಮಿಸಿ ಸಮಾವೇಶಗೊಂಡಿತು.
ನಂತರ ರಾಮದುರ್ಗ ಪಟ್ಟಣದ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ನಡೆದ ಕನಕದಾಸರ ಕಾರ್ಯಕ್ರಮವನ್ನು ಕಟಕೋಳದ ತ್ರಿವಿಧ ದಾಸೋಹಿ ಶ್ರೀ ಅಭಿನವ ಸಿದ್ದರಾಯ ಅಜ್ಜನವರು ಉದ್ಘಾಟಿಸಿ ಮಾತನಾಡಿದರು.
ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ ಅಧ್ಯಕ್ಷತೆ ವಹಿಸಿದ್ದರು. ದಿವ್ಯ ಸಾನಿಧ್ಯವನ್ನು ಹುಲಜಯಂತಿಯ ಶ್ರೀ ಮಾಳಿಂಗರಾಯ ಮಹಾರಾಜರು ವಹಿಸಿದ್ದರು. ಆಲಮಟ್ಟಿಯ ಶ್ರೀ ವಶಿಷ್ಠ ಮುನಿಗಳು, ಲಖನಾಯಕನೊಪ್ಪದ ಕೃಷ್ಣಾನಂದ ಸ್ವಾಮೀಜಿ, ಹಳೇತೊರಗಲ್‌ನ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬೆಂಗಳೂರಿನ ಹಾರೋಹಳ್ಳಿ ಸುವರ್ಣಮುಖಿ ಧಾಮದ ಡಾ| ನಾಗರಾಜ, ಸಾಹಿತಿ ಅರ್ಚನಾ ಅಥಣಿ, ಕನಕದಾಸರ ಜೀವನ ಚರಿತ್ರೆ ಹಾಗೂ ಕುರುಬ ಸಮಾಜದ ಅಭಿವೃದ್ಧಿ ಕುರಿತು ಅತಿಥಿ ಉಪನ್ಯಾಸ ನೀಡಿದರು.
ಪ್ರದೇಶ ಕುರುಬರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಮೆಟಗುಡ್ಡ, ಜಿ.ಪಂ ಮಾಜಿ ಸದಸ್ಯ ರೇಣಪ್ಪ ಸೋಮಗೊಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್. ಕೊಂಗವಾಡ, ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷರಾದ ವಿಠ್ಠಲ ಜಟಗನ್ನವರ, ಕೆಂಪಣ್ಣ ಕ್ವಾರಿ, ರವಿ ಮೊರಬದ, ಸಿದ್ದಪ್ಪ ಮಕ್ಕನ್ನವರ, ಸೇರಿದಂತೆ ಅನೇಕರು ಭಾಗವಹಿಸಿದ್ದರು