ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೌರಕಾರ್ಮಿಕ ಬಂಧುಗಳು

WhatsApp Group Join Now

ಸತ್ಕಾರ್ಯ ಫೌಂಡೇಶನ್ ರಾಮದುರ್ಗ ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ನಗರದ ಅರಮನೆ ಮೈದಾನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಉತ್ಸವ ರಾಮದುರ್ಗ – 2025 ಕಾರ್ಯಕ್ರಮವನ್ನು ನಗರದ ಪುರಸಭೆಯ ಕಾರ್ಮಿಕ ಬಂಧುಗಳು ಕೃಷ್ಣ ಸುಧಾಮರ ಭಾವಚಿತ್ರಕ್ಕೆ ಆರತಿ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಸತ್ಕಾರ್ಯ ಫೌಂಡೇಶನ್ ಅಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ತಾಲೂಕು ಸೇವಾ ಪ್ರಮುಖ ಸಂಗಮೇಶ ಉದಪುಡಿ ಮಾತನಾಡಿ ನಾವೆಲ್ಲ ಸಾಕಷ್ಟು ಹಬ್ಬ ಹರಿದಿನಗಳನ್ನು ಆಚರಣೆ ಮಾಡಿ ಸಂಭ್ರಮಿಸುತ್ತೇವೆ ಆದರೆ ಆ ಸಂಭ್ರಮಕ್ಕಾಗಿ ಸ್ವಚ್ಛತೆ ಮಾಡಿದ ಬಂಧುಗಳನ್ನೇ ಮರೆತುಬಿಡುತ್ತೇವೆ ಅದು ಹೀಗಾಗಬಾರದು , ಇಂದಿನ ಈ ಕೃಷ್ಣ ಜನ್ಮಾಷ್ಟಮಿಯ ಅಷ್ಟೂ ಫಲಾಫಲವು ನಮ್ಮ ನಗರವನ್ನು ಶುದ್ಧವಾಗಿ ಇಡುವ ಈ ಪೌರಕಾರ್ಮಿಕರಿಗೆ ಸಲ್ಲಲಿ ಕಳೆದ 9 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಭಾರತವರ್ಷದಲ್ಲಿ ಯಾವುದೇ ಜಾತಿ ಧರ್ಮಗಳಿಗೆ ಸೇರಿದವರಾಗಿರಲಿ ತಮ್ಮ ಮಗು ರಾಮನಂತಾಗಲಿ ಕೃಷ್ಣನಂತಾಗಲಿ ಎಂದು ಬಯಸುತ್ತಾರೆ, ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿ ವರ್ಷವೂ ಸಾಕಷ್ಟು ಮುಸ್ಲಿಂ ತಾಯಂದಿರು ತಮ್ಮ ಮಗುವನ್ನು ಕೃಷ್ಣ ಹಾಗೂ ರಾಧೆಯ ವೇಷಧಾರಿಯಾಗಿ ಮಾಡಿಕೊಂಡು ಕಾರ್ಯಕ್ರಮದ ವೇದಿಕೆಯ ಮೇಲೆ ಶ್ಲೋಕವನ್ನು ಹೇಳಿಸುತ್ತಾರೆ. ಇದು ಭಾರತದ ಸನಾತನ ಪರಂಪರೆಯ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದ್ದು ಈ ಕಾರಣದಿಂದಲೇ ಇಂದಿಗೂ ಸಹ ಸಾಕಷ್ಟು ವಿದೇಶಿಗರು ಹಾಗೂ ವಿಧರ್ಮೀಯರು ಯಾರದೇ ಆಮಿಷ ಒತ್ತಡ ಇದ್ಯಾವುದೂ ಇಲ್ಲದೆ ಸನಾತನವನ್ನು ಒಪ್ಪಿಕೊಂಡು ಅಪ್ಪಿಕೊಂಡು ಆಲಂಗಿಸಿಕೊಂಡು ಆರಾಧನೆ ಮಾಡಿಕೊಂಡು ಬಂದಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಸಹ ಸಾಕಷ್ಟು ಮುಸ್ಲಿಂ ರಾಷ್ಟ್ರಗಳಲ್ಲಿಯೂ ಪ್ರತಿವರ್ಷ ಜಗನ್ನಾಥನ ರಥಯಾತ್ರೆಗಳಾಗುತ್ತವೆ. ಅಲ್ಲಿನ ಭಕ್ತಾದಿಗಳು ಭಾವುಕರಾಗಿ ಭಗವಂತನ ಮುಂದೆ ಭಜನೆ ನೃತ್ಯಗಳನ್ನೆಲ್ಲವೂ ಮಾಡುವುದನ್ನು ನಾವೆಲ್ಲರೂ ಕಂಡಿದ್ದೇವೆ ಎಂದು ಸನಾತನ ಪರಂಪರೆಯ ಶ್ರೇಷ್ಠತೆಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ 14 ವರ್ಷದ ಒಳಗಿನ ಮಕ್ಕಳಿಗೆ ಆಯೋಜಿಸಲಾದ ಶ್ಲೋಕ ಪಠಣ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ಒಟ್ಟು 34 ಜನ ಭಾಗವಹಿಸಿದ್ದರು. ಈ ಪೈಕಿ ಪ್ರಥಮ ಬಹುಮಾನವನ್ನ ಕ್ಯಾಂಬ್ರಿಡ್ಜ್ ಆಂಗ್ಲ ಮಾಧ್ಯಮ ಶಾಲೆಯ ಬಿಂದುಶ್ರೀ ಬಾನಿ, ದ್ವಿತೀಯ ಬಹುಮಾನವನ್ನು ಆರಾಧ್ಯಾ ಪೇಟೆ, ತೃತೀಯ ಬಹುಮಾನವನ್ನು ಜ್ಞಾನಪ್ರಬೋಧಿನಿ ಶಾಲೆಯ ಅಶ್ವಿಕ ಹಡಪದ ಅವರು ಪಡೆದುಕೊಂಡಿರುತ್ತಾರೆ. ಜೊತೆಗೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕೃಷ್ಣನ ಬಾಲ ಲೀಲೆಗಳಿಗೆ ಸಂಬಂಧಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ನಗರದ ಬೇರೆ ಬೇರೆ ಶಾಲೆಯ 20 ಜನ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ಬಹುಮಾನ ರೂಪದಲ್ಲಿ ಪ್ರಮಾಣ ಪತ್ರವನ್ನು ಹಾಗೂ ಪುಸ್ತಕಗಳನ್ನು ನೀಡಲಾಯಿತು. ತಾಯಂದಿರಿಗೆ ಆಯೋಜಿಸಲಾಗಿದ್ದ ಕೃಷ್ಣನ ಬಾಲ ಲೀಲೆಗಳಿಗೆ ಸಂಬಂಧಿಸಿದ ಕೋಲಾಟ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಪ್ಲಿ ಗ್ರಾಮದ ತಾಯಂದಿರು ಬಂದು ಭಾಗವಹಿಸಿದ್ದು ಅವರಲ್ಲಿರುವ ಕೃಷ್ಣಪ್ರಜ್ಞೆಯ ಜಾಗೃತಿಯನ್ನು ಬಿಂಬಿಸಿತು. ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ವಿಶ್ವ ಹಿಂದೂ ಪರಿಷತ್ ವಿಭಾಗ ಸತ್ಸಂಗ ಪ್ರಮುಖರಾದ ಶ್ರೀ ವಿಜಯೇಂದ್ರ ಜೋಷಿ ಮಾತನಾಡಿ ಇಡಿಯ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಧಾರ್ಮಿಕ ಸಂಘಟನೆಯಾದ ವಿಶ್ವ ಹಿಂದೂ ಪರಿಷದ್ ಸ್ಥಾಪನೆಯಾದ ಶುಭದಿನದಂದು ಶುಭಾಶಯಗಳನ್ನು ತಿಳಿಸಿ ಜನ್ಮಾಷ್ಟಮಿಯ ಕುರಿತ ಧಾರ್ಮಿಕ ಮಹತ್ವವನ್ನು ಜನರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ರಾಮದುರ್ಗ ನಗರದ ಪತಂಜಲಿ ಯೋಗ ಸಮಿತಿಯ ಶಿಕ್ಷಕರಾದ ಶ್ರೀ ರೇವಪ್ಪ ಕೋಟೂರ್ ಅವರು ಮಾತನಾಡಿ ಸತ್ಕಾರ್ಯ ಫೌಂಡೇಶನ್ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಿದರು ಹಾಗೂ ತಾವೂ ಸಹ ಸಂಸ್ಥೆಯೊಂದಿಗೆ ನಿರಂತರವಾಗಿ ಕೈಜೋಡಿಸುವುದಾಗಿ ಸಹಮತ ವ್ಯಕ್ತಪಡಿಸಿದರು. ವಿಶ್ವ ಹಿಂದೂ ಪರಿಷತ್ ರಾಮದುರ್ಗ ಪ್ರಖಂಡದ ಅಧ್ಯಕ್ಷರಾದ ಶ್ರೀ ಪ್ರಕಾಶ ಸೂಳಿಬಾವಿ ವಂದಿಸಿದರು ಸತ್ಕಾರ್ಯ ಫೌಂಡೇಶನ್ ಉಪಾಧ್ಯಕ್ಷರಾದ ವಿಶ್ವನಾಥ ದಿವಟಗಿ ನಗರದ ಮಹಾಂತೇಶ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ದೀಪಕ ಆರಿಬೆಂಚಿ ಸರಾಫ್ ವ್ಯಾಪಾರಸ್ಥರಾದ ಶ್ರೀ ಕೃಷ್ಣ ಪತ್ತೇಪುರ್ ಶಿಕ್ಷಕರಾದ ಚೇತನ್ ದೊಡಮನಿ ಅರುಣ ಡಬಳಾಪುರ ಕಿರಣ ಜೋಗಿ ಸಚಿನ ಮೋಹಿತೆ ಕಿಶೋರ ಮೋಹಿತೆ ಮುತ್ತು ತಳವಾರ ಸಾಗರ ಲಮಾಣಿ ಮುಂತಾದವರು ಉಪಸ್ಥಿತರಿದ್ದರು. ಚಿಕ್ಕ ಮಕ್ಕಳು ಮೊಸರಿನ ಗಡಿಗೆ ಒಡೆಯುವ ಮೂಲಕ ಕಾರ್ಯಕ್ರಮವು ಸುಖಾಂತ್ಯ ಕಂಡಿತು.

About The Author