ತುಪ್ಪರಿ ಹಳ್ಳ, ಬೆಣ್ಣಿಹಳದ ಪ್ರವಾಹದ ಬಗ್ಗೆ ನಿರಂತರ ನಿಗಾ, ಮುನ್ನೆಚ್ಚರಿಕೆ ವಹಿಸಿ; ಬೀಜ, ಗೊಬ್ಬರದ ಕೃತಕ ಅಭಾವ ಸೃಷ್ಟಿ ಆಗದಂತೆ ಅಧಿಕಾರಿಗಳು, ಕ್ರಮವಹಿಸಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು

WhatsApp Group Join Now

ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ಣ ಆವರಿಸಿದ್ದು, ಮಳೆ ತೀವ್ರಗೊಳ್ಳುತ್ತಿದೆ. ಜಿಲ್ಲೆಯ ಎರಡು ಮುಖ್ಯ ಹಳ್ಳಗಳಾದ ತುಪ್ಪರಿ ಹಳ್ಳ ಮತ್ತು ಬೆಣ್ಣಿ ಹಳ್ಳದ ಪ್ರವಾಹದ ಬಗ್ಗೆ ನಿರಂತರ ನಿಗಾ ವಹಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಎರಡು ಹಳ್ಳಗಳಿಗೆ ಸಂಬಂಧಿಸಿದ ಪಿಡಿಓಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಸ್ಥಾನಿಕವಾಗಿ ಕೇಂದ್ರ ಸ್ಥಾನದಲ್ಲಿದ್ದು, ತಾಲೂಕು ಆಡಳಿತಕ್ಕೆ ಮತ್ತು ಜಿಲ್ಲಾಡಳಿತಕ್ಕೆ ನೀರಿನ ಮಟ್ಟದ ಏರಿಕೆ ಹಾಗೂ ಪ್ರವಾಹದ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಜಿಲ್ಲೆಯ ಮಳೆ ಪ್ರಮಾಣ ಮತ್ತು ಹಾನಿ, ಕುಡಿಯುವ ನೀರು ಮತ್ತು ಮೇವು ಸಂಗ್ರಹಣೆ ಹಾಗೂ ಬೆಳೆಹಾನಿ ಪರಿಹಾರ ಪ್ರಗತಿ ಕುರಿತು ಪರಿಶೀಲಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ರೈತರು ಬಿತ್ತನೆ ಆರಂಭಿಸಿದ್ದಾರೆ. ಕೆರೆಗಳು ತುಂಬುತ್ತಿವೆ. ಹಳ್ಳಗಳು ಹರಿಯುತ್ತಿವೆ. ಈ ಹಿನ್ನಲೆಯಲ್ಲಿ ಕಂದಾಯ, ಕೃಷಿ ಮತ್ತು ಪೊಲೀಸ್ ಇಲಾಖೆ ಜಾಗೃತಿ ವಹಿಸಿ, ಜನರ ಜೀವ ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮತ್ತು ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ ಸೀಗುವಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಜಿಲ್ಲೆಯ ಎರಡು ಮುಖ್ಯ ಹಳ್ಳಗಳಾದ ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದ ಪ್ರವಾಹ ಉಂಟಾದರೆ ಸಮರ್ಥವಾಗಿ ನಿರ್ವಹಿಸಿ, ಜನ-ಜಾನುವಾರ ಜೀವ ಹಾನಿ ಆಗದಂತೆ ಮುಂಜಾಗ್ರತೆ ವಹಿಸಬೇಕು. ಅಗತ್ಯವಿದ್ದಲ್ಲಿ ತಕ್ಷಣ ಬಾಧಿತ ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಸ್ಥಳ ಗುರುತಿಸಿ, ಸಿದ್ಧತೆ ಮಾಡಿಕೊಳ್ಳುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯ ಎಲ್ಲ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕರ್ತವ್ಯದ ಕೇಂದ್ರ ಸ್ಥಾನದಲ್ಲಿರಬೇಕು. ಮಳೆ ಹಾನಿ, ಮಳೆ ಪ್ರವಾಹ, ಸಾರ್ವಜನಿಕ ದೂರುಗಳ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ವರದಿ ನೀಡಿ, ಸಾರ್ವಜನಿಕರಿಗೆ ಸಕಾರಾತ್ಮಕವಾಗಿ ಸ್ಪಂಧಿಸಬೇಕು ಎಂದು ಅವರು ಹೇಳಿದರು.

ಬರಗಾಲದ ಹಿನ್ನಲೆಯಲ್ಲಿ ಜಿಲ್ಲೆಯ 51 ಗ್ರಾಮಗಳಲ್ಲಿ 84 ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನಿರಂತರ ಮಳೆಯಿಂದಾಗಿ ಬೋರವೆಲ್‍ಗಳು ಪುನಃಚ್ಛೇತನ ಆಗುತ್ತವೆ. ಕೆರೆಗಳಿಗೆ ನೀರು ಬರುತ್ತಿದೆ. ಆದ್ದರಿಂದ ಮುಂದಿನ ದಿನಗಳ ಪರಿಶೀಲಿಸಿ, ಸ್ಥಳೀಯ ಸಂಸ್ಥೆಗಳ ಬೋರವೆಲ್ ರಿಚಾರ್ಜ್ ಆಗಿದ್ದರೆ, ಖಾಸಗಿ ಬೋರವೆಲ್ ಬಳಕೆ ಬಗ್ಗೆ ಪುನರ್ ಪರಿಶೀಲಿಸಬೇಕು. ಅಗತ್ಯವಿರುವ ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆ ಆಗುವವರೆಗೆ ಮುಂದುವರಿಸಲು ತಾಲೂಕು ಟಾಸ್ಕ್‍ಪೊರ್ಸ್‍ದಲ್ಲಿ ಚರ್ಚಿಸಿ, ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಧಾರವಾಡ ಎಪಿಎಂಸಿಯಲ್ಲಿನ ಮೇವು ಬ್ಯಾಂಕ್‍ದಲ್ಲಿ ಮಾತ್ರ ಮೇವು ಸರಬರಾಜುಗೆ ಬೇಡಿಕೆ ಇದ್ದು, ಅಲ್ಲಿ 100 ಟನ್ ಮೇವು ದಾಸ್ತಾನಿದೆ. ಉಳಿದಂತೆ ಜಿಲ್ಲೆಯ ಮೇವು ಬ್ಯಾಂಕಗಳಿಂದ ಮೇವು ಖರೀದಿಸಲು ಜನರ ಬೇಡಿಕೆ ಇಲ್ಲ. ಈಗಾಗಲೆ ಕೆಲವು ಕಡೆ ಹಸಿರು ಮೇವು ಲಭ್ಯವಾಗುತ್ತಿರುವದರಿಂದ ಮೇವಿನ ಬೇಡಿಕೆ ಕಡಿಮೆ ಆಗಿದೆ. ಸ್ಥಳೀಯ ಶಾಸಕರೊಂದಿಗೆ ಸಮಾಲೋಚಿಸಿ ಮೇವು ಬ್ಯಾಂಕ್ ಮುಂದುವರಿಕೆ ಬಗ್ಗೆ ಮುಂದಿನ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ವಿವಿಧ ಪ್ರಕಾರದ ಬೀಜ ಮತ್ತು ಗೊಬ್ಬರಗಳ ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ, ಗೊಬ್ಬರ ಪೂರೈಸಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸರಾಸರಿ ಶೇ. 22 ರಷ್ಟು ಭೂಮಿಯಲ್ಲಿ ಬಿತ್ತನೆ ಆಗಿದೆ. ಕಳೆದ ಎರಡಮೂರು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವದರಿಂದ ಬಿತ್ತನೆ ಕಾರ್ಯ ಮುಂದಿನ ದಿನಗಳಲ್ಲಿ ವೇಗ ಪಡೆಯುತ್ತದೆ.

ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಬೀಜ, ಗೊಬ್ಬರದ ಕೊರತೆ, ಕೃತಕ ಅಭಾವ ಹಾಗೂ ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು. ರಶೀದಿ ಇಲ್ಲದೆ ಬೀಜ, ಗೊಬ್ಬರ ಮಾರಾಟ, ಅನಧಿಕೃತ ದಾಸ್ತಾನು, ಬೇರೆ ಗೊಬ್ಬರಗಳ ಜಿಂಕ್ ಲಿಂಕ್ ಕಂಡು ಬಂದಲ್ಲಿ ತಕ್ಷಣ ಅಧಿಕಾರಿಗಳು ಎಫ್.ಐ.ಆರ್. ದಾಖಲಿಸಿ, ಅಂತಹ ಅಂಗಡಿ ಸೀಜ್ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶಿಸಿದರು.

ಬಿತ್ತನೆ ಸಮಯದಲ್ಲಿ ರೈತರು ಡಿಎಪಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಸಲ್ಲಿಸಿ, ಪಡೆದುಕೊಂಡರು. ಬೆಳೆ ಎತ್ತರಕ್ಕೆ ಬಂದ ಕೂಡಲೆ ಯೂರಿಯಾ ಗೊಬ್ಬರಕ್ಕೆ ರೈತರ ಬೇಡಿಕೆ ಹೆಚ್ಚಳವಾಗುತ್ತದೆ. ಮತ್ತು ನಿರಂತರ ಮಳೆಯಿಂದಾಗಿ ಭೂಮಿಯಲ್ಲಿ ನೀರು ನಿಂತು ಬೆಳೆಗಳು ಹಳದಿ ವರ್ಣಕ್ಕೆ ತಿರುಗಿದಾಗ ಯೂರಿಯಾ ಗೊಬ್ಬರ ಬೇಡಿಕೆ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ, ಜಿಲ್ಲೆಯ ರೈತರ ಯೂರಿಯಾ ಗೊಬ್ಬರ ಬೇಡಿಕೆಗೆ ಅನುಗುಣವಾಗಿ, ಯೂರಿಯಾ ದಾಸ್ತಾನು ಮಾಡಿಕೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಿರಂತರ ಮಳೆಯಿಂದಾಗಿ ಕೆರೆಗಳು ತುಂಬುತ್ತಿವೆ. ಕೆರೆಯ ಒಡ್ಡು ಒಡೆಯದಂತೆ ಮತ್ತು ಸುಸ್ಥಿತಿಯ ಗೇಟ್‍ಗಳು ಇರುವಂತೆ ಕೆರೆ ಮಾಲೀಕತ್ವ ಹೊಂದಿರುವ ಇಲಾಖೆಗಳು ಕ್ರಮವಹಿಸಬೇಕು. ಕೆರೆಯ ದಂಡೆಯಲ್ಲಿ ಸಾರ್ವಜನಿಕರು ಕೆರೆಗೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನು ಹಾಕಬೇಕು ಎಂದು ಹೇಳಿದರು.
ಹಳ್ಳಗಳು ತುಂಬಿ ಹರಿಯುವದರಿಂದ ಗಿಡಗಂಟಿ, ತ್ಯಾಜ್ಯವಸ್ತುಗಳು ಹಳ್ಳದಲ್ಲಿ ಅಡ್ಡಲಾಗಿ, ನೀರು ಸರಾಗವಾಗಿ ಹರಿದು ಹೋಗಲು ಅಡಚಣೆ ಮಾಡುತ್ತವೆ. ಅಂತಹುಗಳನ್ನು ಈಗಲೇ ತೆರವುಗೊಳಿಸಬೇಕು. ಹಳ್ಳದ ಪ್ರವಾಹ ಹೆಚ್ಚಳ ಕುರಿತು ನಿರಂತರ ಮಾಹಿತಿ ಪಡೆದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಅವರು ಹೇಳಿದರು.
ಮಳೆ ನೀರು, ಪ್ರವಾಹದಿಂದಾಗಿ ನೀರಿನ ಹರಿವು ಹೆಚ್ಚಳವಾಗಿ ಸೇತುವೆಗಳು ಮುಳುಗುತ್ತವೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ ಹಾಗೂ ಪೊಲೀಸ್ ಕಾವಲು ಹಾಕಿ ಜನರನ್ನು ಸಂಚರಿಸದಂತೆ ತಡೆಯಬೇಕು. ಅಗತ್ಯವಾದಲ್ಲಿ ತಾತ್ಕಾಲಿಕ ತಡೆಗೊಡೆ ನಿರ್ಮಿಸಿ, ಸಾರ್ವಜನಿಕರ ಸಂಚಾರ ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾಡಿನ ಅಂಚಿನಲ್ಲಿರುವ ಕಂಬಾರಗಣಿ ಗ್ರಾಮ ಸಂಪರ್ಕಕ್ಕೆ ಇರುವ ಸೇತುವೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಬೇಗ ಪೂರ್ಣಗೊಳಿಸಬೇಕು. ಆದ್ಯತೆ ಮೇಲೆ ಕೆಲಸ ಮಾಡಿ, ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಬೇಕು. ಲೋಕೋಪಯೋಗಿ ಹಿರಿಯ ಅಧಿಕಾರಿಗಳು ಜವಾಬ್ದಾರಿಯಿಂದ ಕಾಮಗಾರಿ ಮಾಡಬೇಕು.

ಕಂಬಾರಗಣವಿ ಸೇತುವೆ ಸೇರಿದಂತೆ ಯಾವುದೇ ಸೇತುವೆ, ಕೆರೆಗಳಿಂದ ಸಾರ್ವಜನಿಕ ಹಾನಿ ಆದರೆ, ಅದರ ಪರಿಹಾರವನ್ನು ಸಂಬಂಧಿಸಿದ ಇಲಾಖೆಗಳಿಂದ ಭರಿಸಲು ಆದೇಶಿಸಲಾಗುತ್ತದೆ. ಅಧಿಕಾರಿಗಳು ಎಚ್ಚರಿಕೆಯಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಿರಂತರವಾಗಿ ನಡೆಯುತ್ತಿದ್ದು, ಕೆಲವು ಇಲಾಖೆ ಅಧಿಕಾರಿಗಳು ಪೂರ್ವಾನುಮತಿ ಪಡೆಯದೇ ಸಭೆಗೆ ಗೈರಾಗುತ್ತಿದ್ದಾರೆ. ಇಂದಿನ ಸಭೆಗೆ ಮುಖ್ಯವಾಗಿ ಲೋಕೋಪಯೋಗಿ ಇಲಾಖೆ ಇಇ ಬರಬೇಕಿತ್ತು. ಅನುಮತಿ ಪಡೆಯದೇ ಗೈರಾಗಿದ್ದಾರೆ. ಮುಂದಿನ ಸಭೆಗೆ ಹಾಜರಾಗದಿದಲ್ಲಿ, ಅಮಾನತ್ತು ಮಾಡಿ ಆದೇಶಿಸಲಾಗುತ್ತದೆ. ಇದು ಬಹು ಮುಖ್ಯ ಸಭೆ ಆಗಿರುವದರಿಂದ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗಬೇಕೆಂದು ಅವರು ಎಚ್ಚರಿಸಿದರು.

ಮಳೆಗಾಲ ಆರಂಭವಾಗಿದ್ದರಿಂದ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಭಾಗಶಃ ಮನೆ ಹಾನಿ ಆದ ಬಗ್ಗೆ ವರದಿ ಆಗುತ್ತಿವೆ. ಮನೆ ಹಾನಿ ಬಗ್ಗೆ ನಿಖರವಾದ ಮತ್ತು ಸ್ಪಷ್ಟವಾದ ವರದಿ ಸಲ್ಲಿಸಬೇಕು. ಯಾವುದೇ ಒತ್ತಡ, ಯಾರದೋ ಪ್ರಭಾವಕ್ಕೆ ಒಳಗಾಗಿ ತಪ್ಪು, ಅಪೂರ್ಣ ಅಥವಾ ಸುಳ್ಳು ವರದಿ ಸಲ್ಲಿಸಿದಲ್ಲಿ ವರದಿ ಸಲ್ಲಿಸಿದವರ ಮತ್ತು ಅದನ್ನು ಅಂಗಿಕರಿಸಿದವರ ವಿರುದ್ಧ ಇಲಾಖಾ ನಿಯಮಾವಳಿ ಪ್ರಕಾರ ಕ್ರಮ ಜರುಗಿಸಿ, ಶಿಸ್ತು ಕ್ರಮಕ್ಕೆ ಆದೇಶಿಸಲಾಗುತ್ತದೆ.

ಮಳೆ ಹಾನಿ ಪ್ರಕರಣಗಳನ್ನು ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ, ಜಿಪಿಎಸ್ ಪೋಟೊದೊಂದಿಗೆ ನಿಖರವಾದ ವರದಿ ನೀಡಬೇಕು. ಎನ್.ಡಿ.ಆರ್.ಎಫ್. ನಿಯಮಗಳ ಪ್ರಕಾರ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈಗಾಗಲೇ ಮಳೆಗಾಲ ಆರಂಭವಾಗಿದೆ. ಇನ್ನೂ ಕಾಲಕಳೆಯದೆ ಅಧಿಕಾರಿಗಳು ತಕ್ಷಣ ಕಟ್ಟಡಗಳ ದುರಸ್ತಿ ಕೈಗೊಳ್ಳಬೇಕು. ಕಚೇರಿ ಪ್ರೊಸಿಜರ್ ನಂತರ ಮಾಡಿ, ಮೊದಲು ಮಕ್ಕಳಿಗೆ ಉತ್ತಮ ಕೊಠಡಿ ಒದಗಿಸಿ, ತುರ್ತು ದುರಸ್ತಿ ಅಗತ್ಯವಿರುವ ಶಾಲೆಗಳ ಕೊಠಡಿಗಳನ್ನು ಪಿಆರ್‍ಇಡಿ. ಪಿಡಬ್ಲ್ಯುಡಿ ಇಲಾಖೆಗಳಿಂದ ತಕ್ಷಣ ದುರಸ್ತಿ ಮಾಡುವಂತೆ ಮತ್ತು ಅದಕ್ಕೆ ಅಗತ್ಯವಿರುವ ಅನುದಾನವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯತದಿಂದ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಕೃಷಿ ಚುಟುವಟಿಕೆಗಳು ವೇಗ ಪಡೆದಿರುವದರಿಂದ ರೈತರು, ಕೃಷಿ ಕೂಲಿ ಕಾರ್ಮಿಕರು, ಕುರಿಗಾರರು ಮಳೆಗೆ ಆಸರೆ ಪಡೆಯಲು ಗಿಡ, ಮರಗಳ ಕೆಳಗೆ ಆಸರೆ ಪಡೆಯುತ್ತಾರೆ. ಹೊಲದಲ್ಲಿ ಉಳಿಯುತ್ತಾರೆ. ಅವರಿಗೆ ಗುಡುಗು, ಸಿಡಿಲುಗಳಿಂದ ಸುರಕ್ಷತೆ ಪಡೆಯಲು ಅಗತ್ಯ ತಿಳುವಳಿಕೆ ನೀಡಬೇಕು. ಗ್ರಾಮಗಳಲ್ಲಿ ಡಂಗುರ ಸಾರಿ, ಧ್ವನಿವರ್ಧಕ ಬಳಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಳೆಗಾಲದಲ್ಲಿ ಮರ, ಟೊಂಗೆ ಬಿಳುವುದು ಸಾಮಾನ್ಯ. ಅವುಗಳನ್ನು ಮೊದಲೇ ಗುರುತಿಸಿ ಕಟಾವ್ ಮಾಡುವುದು ಸೂಕ್ತ. ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ ಜಂಟಿಯಾಗಿ ಸಮೀಕ್ಷೆ ಮಾಡಿ ಒಣಗಿದ, ಹಾಳಾದ ಮರಗಳನ್ನು ಮತ್ತು ದೊಡ್ಡ ಮರದ ಟೊಂಗೆಗಳನ್ನು ತೆಗೆಯಬೇಕು. ವಿದ್ಯುತ್ ನಿರಂತರವಾಗಿ ಸರಬರಾಜು ಆಗುವಂತೆ ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಈ ಒಂದು ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ಎಂ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನೀಯರ್ ಆರ್.ಎಂ.ಸೊಪ್ಪಿಮಠ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

About The Author