ಧಾರವಾಡ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ತರಬೇತಿ ಕಾರ್ಯಾಗಾರ

WhatsApp Group Join Now

ಧಾರವಾಡ ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಶಾಲಾ ಮುಖ್ಯೋಪಾಧ್ಯಾಯರಿಗೆ, ವಸತಿ ನಿಲಯದ ನಿಲಯ ಪಾಲಕರಿಗೆ ಮಕ್ಕಳ ರಕ್ಷಣೆಗಾಗಿ ಇರುವ ಮಕ್ಕಳ ರಕ್ಷಣಾ ನೀತಿ-2016, ಬಾಲ ನ್ಯಾಯ ಕಾಯ್ದೆ-2015, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ-2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಅವರು ಮಾತನಾಡಿ,
ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ವiಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲ ಇಲಾಖೆಗಳಿಂದ ಮಕ್ಕಳಿಗೆ ಸಂಬಂದಿಸಿದ ವಿವಿಧ ಕಾನೂನುಗಳ ಕುರಿತು ಹಲವಾರು ಬಾರಿ ಜಾಗೃತಿ ಕಾರ್ಯಕ್ರಮಗಳು ಜರುಗಿಸಲಾಗಿದೆ. ಪೋಕ್ಸೋ ಪ್ರಕರಣಗಳು ಮತ್ತು ಶಾಲೆ ಬಿಟ್ಟ ಮಕ್ಕಳು ಇನ್ನೂ ಇದ್ದಾರೆ. ಆದ್ದರಿಂದ ಎಲ್ಲ ಇಲಾಖೆಯವರು ಕಡ್ಡಾಯವಾಗಿ ಯಾವುದೇ ಮಕ್ಕಳ ಪ್ರಕರಣಗಳು ಕಂಡು ಬಂದಲ್ಲಿ ಎಫ್‍ಐಆರ್ ದಾಖಲಿಸಬೇಕು. ಮಕ್ಕಳ ಕಾನೂನುಗಳ ಕುರಿತು ಎಲ್ಲ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅವಶ್ಯವಿದೆ. ಪ್ರತಿ ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಪೋಕ್ಸೊ ಹಾಗೂ ಬಾಲ್ಯ ವಿವಾಹಗಳ ಕುರಿತು ಕಡ್ಡಾಯವಾಗಿ ಅರಿವು ಮೂಡಿಸಬೇಕು. ಎಲ್ಲರೂ ಪ್ರೀತಿ ಸೌಹಾರ್ದತೆಯಿಂದ ಇರಬೇಕು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ವ್ಹಿ. ಬರಮಣಿ ಅವರು ಮಾತನಾಡಿ, ಸಮಾಜದ ಉತ್ತಮ ಬೆಳವಣಿಗೆಗೆ ಸಾಕಷ್ಟು ಕಾನೂನುಗಳು ಇದ್ದು, ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡಬೇಕು. ಸದರಿ ಕಾನೂನುಗಳನ್ನು ಅನುಷ್ಠಾನಗೊಳಿಸುವಲ್ಲಿ ಕೇವಲ ಪೊಲೀಸ್‍ರ ಪಾತ್ರವಲ್ಲದ್ದೇ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ. ತೆರೆದ ಮನೆ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ವಿವಿಧ ಕಾನೂನು ಅರಿವನ್ನು ನೀಡುತ್ತಿದ್ದೇವೆ. ಇಂದಿನ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆಯಿಂದ ತಮ್ಮ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ತುಂಬಾ ಮುಖ್ಯ. ಯಾವುದೇ ಸೈಬರ ಕ್ರೈಮ್‍ಗಳು ಉಂಟಾದಾಗ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ, ಮಾಹಿತಿ ನೀಡುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಡಾ. ಕಮಲಾ ಬೈಲೂರ ಅವರು ಮಾತನಾಡಿ, ಮಕ್ಕಳಿಗಾಗಿ ಸರಕಾರದಿಂದ ಸಾಕಷ್ಟು ಯೋಜನೆಗಳು ಜಾರಿಯಲ್ಲಿವೆ. ಮಕ್ಕಳನ್ನು ರಕ್ಷಿಸುವಲ್ಲಿ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಪಾತ್ರವಲ್ಲದೇ ಎಲ್ಲ ಇಲಾಖೆಯ ಸಹಕಾರದೊಂದಿಗೆ ಮಕ್ಕಳ ರಕ್ಷಣೆಯಾಗಬೇಕು. ಮಕ್ಕಳು ಹೆಚ್ಚು ಸಮಯ ಶಾಲೆಯಲ್ಲೇ ಕಳೆಯುತ್ತಿದ್ದು, ಶಿಕ್ಷಕರಿಗೆ ವಿಶೇಷ ಗೌರವವನ್ನು ನೀಡುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಬಾಲ್ಯ ವಿವಾಹ ತಡೆಯುವಲ್ಲಿ ಎಲ್ಲರೂ ಗಮನ ಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಅವರು ಮಾತನಾಡಿ, ಶಿಕ್ಷಕರು ಶಾಲೆಯಲ್ಲಿರುವ ಪ್ರತಿಯೊಂದು ಮಗು ತಮ್ಮ ಮಗುವೆಂದು ಭಾವಿಸಿ, ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಕೊಪ್ಪಳ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ, ಕಾರ್ಯಕ್ರಮ ವ್ಯವಸ್ಥಾಪಕ ಹರೀಶ ಜೋಗಿ ಅವರು ನೆರೆದ ತರಬೇತುದಾರರಿಗೆ ಮಕ್ಕಳ ರಕ್ಷಣೆಗಾಗಿ ಇರುವ ಬಾಲ ನ್ಯಾಯ ಕಾಯ್ದೆ-2015, ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ 2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಮಕ್ಕಳ ರಕ್ಷಣಾ ನೀತಿ-2016, ಮಕ್ಕಳ ಸಹಾಯವಾಣಿ-1098/112 ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಅಜಯ ಎನ್., ಎಸ್.ಎನ್.ಹುಡೇದಮನಿ, ವೇದಿಕೆಯಲ್ಲಿದ್ದರು. ಮಹ್ಮದಅಲಿ ತಹಶೀಲ್ದಾರ ಅವರು ಕಾರ್ಯಕ್ರಮ ನಿರೂಪಿಸಿದರು. ಕರೆಪ್ಪ ಕೌಜಲಗಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು.

About The Author