ರಾಮದುರ್ಗ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರಕಾರದ 2ಎ ಮೀಸಲಾತಿ ನೀಡಬೇಕೆಂದು ಬೆಳಗಾವಿ ಸುವರ್ಣಸೌಧ ಬಳಿ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ ಮಾಡಿಸಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮುದಾಯದ ಜನತೆ ಗುರುವಾರ ರಾಮದುರ್ಗ ತಾಲೂಕಿನ ಕೆ.ಚಂದರಗಿಯ ರಾಜ್ಯ ಹೆದ್ಧಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬೆಳಗಾವಿ-ಬಾಗಲಕೋಟ ರಾಜ್ಯ ಹೆದ್ಧಾರಿ ಕೆ.ಚಂದರಗಿಯ ಚೆನ್ನಮ್ಮ ಸರ್ಕಲ್‌ನಲ್ಲಿ ಕೆಲಕಾಲ ರಸ್ತೆತಡೆ ನಡೆಸಿ, ಪಂಚಮಸಾಲಿ ಸಮುದಾಯ ವಿರೋಧಿ ನೀತಿ ಅನುಸರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ ಸಿದ್ಧಾರೂಢ ಬನ್ನಿಕೊಪ್ಪ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೂಡಲೇ ಲಾಠಿಚಾರ್ಜ ಮಾಡಲು ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಪಂಚಮಸಾಲಿ ಸಮಾಜ ಬಾಂಧವರಂಮೇಲೆ ದಾಖಲಿಸಿದ ಎಲ್ಲಾ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಶೀಘ್ರ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರಕಾರದ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಕೇಂದ್ರ ಸರಕಾರದ ಓಬಿಸಿ ಮೀಸಲಾತಿಗೆ ಶಿಪಾರಸ್ಸು ಮಾಡಬೇಕು. ಒಂದು ವೇಳೆ ಸರಕಾರ ವಿಳಂಭ ಧೋರಣೆ ಅನುಸರಿಸಿದಲ್ಲಿ ರಾಜ್ಯಾಧ್ಯಂತ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಮುಂದಾಗುವ ಅನಾಹುತಕ್ಕೆ ರಾಜ್ಯ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಾರುತಿ ಕೊಪ್ಪದ, ವೀರರಾಣಿ ಚೆನ್ನಮ್ಮ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಫ್. ಬಸಿಡೋಣಿ, ಮುಖಂಡರಾದ ವೈ.ಎಚ್.ಪಾಟೀಲ, ಪಿ.ಎಫ್. ಪಾಟೀಲ, ಪರುತಗೌಡ ಪಾಟೀಲ, ಸಿ.ಬಿ. ಪಾಟೀಲ, ಶಾಸನಗೌಡ ಪಾಟೀಲ, ಬಿ.ಎಂ. ಪಾಟೀಲ, ಜಿ.ವ್ಹಿ. ನಾಡಗೌಡ್ರ, ಸಿದ್ದನಗೌಡ ಪಾಟೀಲ ಶ್ರೀದೇವಿ ಮಾದನ್ನವರ, ಉಮೇಶ ಕೊಳವಿ, ಗೌಡಪ್ಪಗೌಡ ಪಾಟೀಲ, ಮಾರುತಿ ಮೇಟಿ, ನಿಂಗನೌಡ ಪಾಟೀಲ, ಸದಾಶಿವ ಹಳ್ಳದ, ಮುರಕಟ್ನಾಳ, ಶಂಕರ ಕತ್ತಿ ಸೇರಿದಂತೆ ಇತರರಿದ್ದರು.
ಬಂಧನ ಬಿಡುಗಡೆಃ ರಸ್ತೆತಡೆ ನಡೆಸಿ, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ತೀವ್ರ ಸ್ವೂರೂಪ ಪಡೆದುಕೊಳ್ಳಲಿದೆ ಎಂದು ಅರಿತ ಸಿಪಿಐ ಐ.ಆರ್. ಪಟ್ಟಣಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಪಂಚಮಸಾಲಿ ಮುಖಂಡರನ್ನು ವಶಕ್ಕೆ ಪಡೆದು ಬಂಧಿಸಿ, ನಂತರ ಬಿಡುಗಡೆಗೊಳಿಸಿದ ಘಟನೆ ನಡೆಯಿತು.