ಮಡಿಕೇರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾಗೃತಿ ಕಾರ್ಯಾಗಾರ 30 ದಿನದೊಳಗೆ ಮಾಹಿತಿ ನೀಡದಿದ್ದರೆ 25 ಸಾವಿರ ದಂಡ, ತಪ್ಪಿದ್ದಲ್ಲಿ 5 ವರ್ಷ ಜೈಲು – ಅಧಿಕಾರಿಗಳಿಗೆ ಆಯುಕ್ತರಾದಡಾ.ಹರೀಶ್ ಕುಮಾರ್ ಕ್ಲಾಸ್‌

WhatsApp Group Join Now

ಮಡಿಕೇರಿ: ಮಾಹಿತಿ ಹಕ್ಕು ಕಾಯ್ದೆಯು ಸರ್ಕಾರಿ ನೌಕರರ ರಕ್ಷಣೆ ಮತ್ತು ಭದ್ರತೆಗೆ ಇದೆ ಎಂದು ಭಾವಿಸಬೇಕೇ ಹೊರತು, ಇದರಿಂದ ಸರ್ಕಾರಿ ಕೆಲಸಕ್ಕೆ ಅಡ್ಡಿ ಎಂದು ತಿಳಿದುಕೊಳ್ಳಬಾರದು. 30 ದಿನದ ಒಳಗಡೆ ಮಾಹಿತಿ ನೀಡಬೇಕೆಂದು ರಾಜ್ಯ ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ ಮತ್ತು ಡಾ. ಹರೀಶ್ ಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸುಮಾರು ಎರಡುವರೆ ಗಂಟೆಗಳ ಕಾಲ ಮಾಹಿತಿ ಆಯುಕ್ತರು ಅಧಿಕಾರಿಗಳಿಗೆ ಪಾಠ ಮಾಡಿದರು.

ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಅವರು ಮಾತನಾಡಿ ಮಾಹಿತಿ ಹಕ್ಕು ಕಾಯ್ದೆಯು ಸರಳವಾಗಿದ್ದರೂ ಸಹ ಗಂಭೀರವಾಗಿದೆ. ಅದನ್ನು ಅರ್ಥಮಾಡಿಕೊಂಡು ಕಚೇರಿಗೆ ಸಲ್ಲಿಕೆಯಾದ ಅರ್ಜಿಗೆ ನಿಯಮಾನುಸಾರ 30 ದಿನದೊಳಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಉತ್ತರದಾಯಿತ್ವ ಹೊಂದಿರಬೇಕು. ಜೊತೆಗೆ ಪಾರದರ್ಶಕತೆ ಇದ್ದಲ್ಲಿ ವಿಚಲಿರಾಗುವ ಅಗತ್ಯವಿಲ್ಲ. ಆ ದಿಸೆಯಲ್ಲಿ ಪ್ರಾಮಾಣಿಕತೆ ಇರಬೇಕು. ಎಲ್ಲರೂ ಸಹ ಮನುಷ್ಯರೇ ಆಗಿದ್ದು, ತಪ್ಪುಗಳು ಆಗುತ್ತವೆ. ಅದನ್ನು ತಿದ್ದಿ ನಡೆಯುವುದು ಅತ್ಯಗತ್ಯ. ಅದನ್ನು ಬಿಟ್ಟು ಸುಳ್ಳು ಮಾಹಿತಿ ನೀಡಿ ಪೇಚಿಗೆ ಸಿಲುಕಬಾರದು. ಸತ್ಯದ ಮಾಹಿತಿ ನೀಡಿದ್ದಲ್ಲಿ ಕ್ಷಮೆಗೂ ಅರ್ಹರಿರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.

ಕೆಡಿಪಿ ಸಭೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ಸಲ್ಲಿಕೆ, ವಿಲೇವಾರಿ ಮತ್ತಿತರ ಸಂಬಂಧ ಚರ್ಚಿಸಿದ್ದಲ್ಲಿ ಸಮಸ್ಯೆಯನ್ನು ಜಿಲ್ಲಾ ಮಟ್ಟದಲ್ಲಿಯೇ ಪರಿಹರಿಸಿಕೊಳ್ಳಬಹುದು ಎಂದು ಮಾಹಿತಿ ಆಯುಕ್ತರು ಅಭಿಪ್ರಾಯಪಟ್ಟರು.

ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಮಾಹಿತಿ ಹಕ್ಕು ಸಹಕಾರಿಯಾಗಿದ್ದು, ಸದಾ ಎಚ್ಚರ ನೀಡುತ್ತದೆ. ಹಾಗಾಗಿ ಅಧಿಕಾರಿಗಳು ಸಾಧ್ಯವಾದಷ್ಟು ಮುನ್ನೆಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು. ಮಾಹಿತಿ ಹಕ್ಕು ಕಾಯ್ದೆಯನ್ನು ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರ ಜೊತೆ ಯಾವುದೇ ಕಾರಣಕ್ಕೂ ಕರೆ ಮಾಡಿ ಮಾತನಾಡಬಾರದು. ಅಡ್ಡದಾರಿ ಹಿಡಿಯಬಾರದು ಎಂದು ಬದ್ರುದ್ದೀನ್ ಅವರು ಸಲಹೆ ನೀಡಿದರು.

ನಿಯಮ 4(1)ಎ ಮತ್ತು 4(1) (ಬಿ)ರಡಿ ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸಬೇಕು. ನಿಖರ, ನಿರ್ದಿಷ್ಟ ಹಾಗೂ ಸ್ಪಷ್ಟವಾಗಿ 150 ಪದಕ್ಕಿಂತ ಕಡಿಮೆ ಮಾಹಿತಿ ಒದಗಿಸಬೇಕು. ಯಾವುದೇ ಕಾರಣಕ್ಕೂ ಕ್ರೋಢೀಕರಿಸಿ ಮಾಹಿತಿ ನೀಡಬಾರದು. ಮಾಹಿತಿ ಹಕ್ಕು ಕಾಯ್ದೆಯಡಿ ವರ್ಷಕ್ಕೆ ದೇಶಾದ್ಯಂತ ಸರಾಸರಿ 60 ಲಕ್ಷ ಅರ್ಜಿಗಳು ಸಲ್ಲಿಕೆ ಆಗುತ್ತವೆ , ರಾಜ್ಯದಲ್ಲಿ 6 ಲಕ್ಷ ಅರ್ಜಿಗಳು, ಹಾಗೆಯೇ ಆಯೋಗಕ್ಕೆ ವರ್ಷಕ್ಕೆ ಸರಾಸರಿ 30 ಸಾವಿರ ಅರ್ಜಿಗಳು ಸಲ್ಲಿಕೆ ಆಗುತ್ತದೆ. ಮೇಲ್ಮನವಿ ಬಾಕಿಯಲ್ಲಿ ರಾಜ್ಯದಲ್ಲಿ ಕೊಡಗು ಜಿಲ್ಲೆ ಕೊನೆ ಸ್ಥಾನದಲ್ಲಿದೆ. ಇದನ್ನು ಸೊನ್ನೆಗೆ ತರಬೇಕು ಎಂದರು.

ಮಾಹಿತಿ ಆಯುಕ್ತರಾದ ಡಾ.ಹರೀಶ್ ಕುಮಾರ್ ಅವರು ಮಾತನಾಡಿ ಸರ್ಕಾರಿ ನೌಕರರನ್ನು ಸಾರ್ವಜನಿಕರು ನೋಡುವ ದೃಷ್ಟಿ, ಸರ್ಕಾರಿ ನೌಕರರು ಸಮಾಜವನ್ನು ನೋಡುವ ದೃಷ್ಟಿ ಎರಡನ್ನು ಗಮನಿಸಬೇಕು. ಸ್ವೀಡನ್ ದೇಶದಲ್ಲಿ 1776 ರಲ್ಲಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಲಾಗಿದೆ. ಕರ್ನಾಟಕ ಇಡೀ ದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ ಪ್ರಥಮ ರಾಜ್ಯವಾಗಿದೆ ಎಂದು ತಿಳಿಸಿದರು. ಮಾಹಿತಿ ಹಕ್ಕು ಅಧಿನಿಯಮವು 2005 ರಲ್ಲಿ ಜಾರಿಗೆ ಬಂದಿದ್ದು, ಉತ್ತಮ ಆಡಳಿತ, ದಕ್ಷತೆ ಮತ್ತು ಪಾರದರ್ಶಕತೆ ತರುವುದು ಉದ್ದೇಶವಾಗಿದೆ ಎಂದು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆ ಇರುವುದರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸರ್ಕಾರಿ ನೌಕರರ ರಕ್ಷಣೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ‘ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಕೆಯಾದ 30 ದಿನದೊಳಗೆ ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದಲ್ಲಿ 25 ಸಾವಿರ ದಂಡ ವಿಧಿಸಲಾಗುತ್ತದೆ. ಜೊತೆಗೆ ತಪ್ಪು ಮಾಡಿದ್ದಲ್ಲಿ 5 ವರ್ಷ ಜೈಲು ಶಿಕ್ಷೆ ಇದೆ. ಆದ್ದರಿಂದ ದಾಖಲೆ ನಿರ್ವಹಣೆ ಅತೀ ಮುಖ್ಯ ಎಂದು ಎಚ್ಚರಿಕೆ ನೀಡಿದರು.

ಅರ್ಜಿ ಸಲ್ಲಿಸಿದವರು ಬಿಪಿಎಲ್ ಕಾರ್ಡ್‍ದಾರರಾಗಿದ್ದರೆ 100 ಪುಟಗಳವರೆಗೆ ಉಚಿತವಾಗಿ ಮಾಹಿತಿ ನೀಡಬೇಕು. ಉಳಿದಂತೆ ಪ್ರತಿ ಪುಟಕ್ಕೆ 2 ರೂ.ನಂತೆ ಶುಲ್ಕ ಪಾವತಿಸಿಕೊಂಡು ಮಾಹಿತಿ ಒದಗಿಸಬೇಕು. ಮಾಹಿತಿ ಹಕ್ಕು ಕಾಯ್ದೆಯನ್ನು ಜನರು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಮಾಹಿತಿ ಹಕ್ಕು ಕಾಯ್ದೆಯಡಿ ವೈಯಕ್ತಿಕ ವಿವರ ಬೇಕಿಲ್ಲ. ಮಾಹಿತಿ ಹಕ್ಕು ಕಾಯ್ದೆ ಬಲಪಡಿಸುವುದು, ಜೊತೆಗೆ ದುರುಪಯೋಗ ತಡೆಯಲು ಆಯೋಗ ಮುಂದಾಗಿದೆ ಎಂದರು.

ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಸಹ ಸಲ್ಲಿಕೆಯಾಗುತ್ತಿವೆ. ಸಿಸಿಟಿವಿ ಪೂಟೇಜ್ ಜತನ ಮಾಡಿಕೊಳ್ಳುವಂತಾಗಬೇಕು. ಸಾರ್ವಜನಿಕ ಆಡಳಿತ ಅಧಿಕಾರಿಗಳಲ್ಲಿ ಹೊಣೆಗಾರಿಕೆ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಮಾಹಿತಿ ಆಯುಕ್ತರು ವಿವರಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳುವಳಿಕೆ ಇರಬೇಕು. ಸಾರ್ವಜನಿಕ ಕೆಲಸ ಮಾಡುವಾಗ ಎಚ್ಚರವಹಿಸಬೇಕು. ಸಾರ್ವಜನಿಕ ಅಧಿಕಾರಿ ಯಾರೇ ಮಾಹಿತಿ ಕೇಳಿದರೂ ಸಹ ನೀಡಬೇಕು ಎಂದರು.

ಸಾಧ್ಯವಿದ್ದಲ್ಲಿ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಭೂಸುರಕ್ಷಾ ಯೋಜನೆಯಡಿ ಡಿಜಿಟಲೀಕರಣವಾಗುತ್ತಿದ್ದು, ರಾಜ್ಯದಲ್ಲಿ ಕೊಡಗು ಪ್ರಥಮ ಜಿಲ್ಲೆಯಾಗಿದೆ. ಮುಂದಿನ ದಿನಗಳಲ್ಲಿ ಶೇಕಡಾವಾರು ಪ್ರಗತಿ ಸಾಧಿಸಲು ಮುಂದಾಗುತ್ತಿದೆ ಎಂದು ವಿವರಿಸಿದರು.

ಮಾಹಿತಿ ಹಕ್ಕು ಕಾಯ್ದೆಯಡಿ ಆನ್‍ಲೈನ್ ಮೂಲಕವೂ ಅರ್ಜಿ ಸಲ್ಲಿಕೆಯಾಗುತ್ತಿದ್ದು, ಈ ಬಗ್ಗೆಯೂ ಸಹ ಗಮನಹರಿಸಬೇಕು ಎಂದು ಬದ್ರುದ್ದೀನ್ ಅವರು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಇ-ಕಚೇರಿ, ಇ-ಆಡಳಿತ ವ್ಯವಸ್ಥೆ ವೇಗ ಪಡೆಯುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಹರೀಶ್ ಕುಮಾರ್ ಅವರು ಸಲಹೆ ನೀಡಿದರು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವವರು ಮಾಹಿತಿ ಹಕ್ಕು ಕಾರ್ಯಕರ್ತ ಎಂದು ಬಿಂಭಿಸಿಕೊಳ್ಳುತ್ತಿರುವ ಬಗ್ಗೆ ಗಮನಸೆಳೆದಾಗ ಪ್ರತಿಕ್ರಿಯಿಸಿದ ಬದ್ರುದ್ದೀನ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವವರು ಅವರೊಬ್ಬ ಅರ್ಜಿದಾರರೇ ಹೊರತು ಯಾವುದೇ ವಿಶೇಷ ಪ್ರಾಧಾನ್ಯತೆ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author