
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿದರು.
ಮತದಾನ ದಿನ ಸಮೀಪಿಸುತ್ತಿರುವುದರಿಂದ ಚುನಾವಣಾ ಸಿಬ್ಬಂದಿ ಕೂಡಲೇ ಮನೆ ಮನೆಗೆ ತೆರಳಿ ಮತದಾರರ ಚೀಟಿ ವಿತರಣೆ ಮಾಡಬೇಕು ಎಂದು ಹೇಳಿದರು.
ಮತದಾನ ಜಾಗೃತಿಗಾಗಿ ಅನೇಕ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ಬಿಎಲ್.ಓ.ಗಳು ಮನೆಮನೆಗೆ ತೆರಳಿ ಮತದಾರರ ಚೀಟಿ ವಿತರಿಸುವುದರಿಂದ ಮತದಾನ ಪ್ರಮಾಣ ಹೆಚ್ಚಿಸಲು ಸಾಧ್ಯವಾಗಲಿದೆ.
ಕಳೆದ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ತಪ್ಪದೇ ಮತದಾರರ ಚೀಟಿ ವಿತರಿಸಬೇಕು. ಇದರಿಂದ ಸಾರ್ವಜನಿಕರಿಗೆ ತಮ್ಮ ಮತಗಟ್ಟೆಯನ್ನು ತಲುಪಲು ಅನುಕೂಲವಾಗಲಿದೆ ಎಂದು ನಿತೇಶ್ ಪಾಟೀಲ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ . ಸಹಾಯಕ ಚುನಾವಣಾಧಿಕಾರಿಗಳಾದ ಪಿ.ಎನ್.ಲೋಕೇಶ್, ರಾಜಶ್ರೀ ಜೈನಾಪುರ, ಡಾ.ರಾಜೀವ್ ಕೂಲೇರ್, ಬಲರಾಮ್ ಚವಾಣ, ಪ್ರಭಾವತಿ ಫಕ್ಕೀರಪುರ, ಸತೀಶ್ ಕುಮಾರ್, ಷಕೀಲ್ ಅಹ್ಮದ್ ಭಾಗವಹಿಸಿದ್ದರು