ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಜನವರಿ 26 ರಂದು ತಾಲೂಕಾ ಕುರುಬರ ಸಂಘ ಹಾಗೂ ಹಾಲುಮತ ಸಮಾಜದ ನೇತೃತ್ವದಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ನುಡಿನಮನ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಕನಕ ಭವನದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ, ಕ್ರಾಂತಿವಿರ ಸಂಗೊಳ್ಳಿ ರಾಯಣ್ಣನವರು ಹುತಾತ್ಮರಾದ ಪ್ರಯುಕ್ತ ತಾಲೂಕಿನ ಸಮಾಜ ಬಾಂಧವರ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮವನ್ನು ಸಾಲಹಳ್ಳಿ ಗ್ರಾಮದ ಶ್ರೀ ಬಬಲಾದೀಶ್ವರ ಮಠದ ಆವರಣದಲ್ಲಿ ಜ.26 ರಂದು ಮದ್ಯಾಹ್ನ 1.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಮಾಜ ಬಾಂಧವರು ಹಾಗೂ ತಾಲೂಕಿನ ಸಮಸ್ತ ರಾಯಣ್ಣನವರ ಅಭಿಮಾನಿ ಬಳಗದವರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದ ಸಾನಿಧ್ಯವನ್ನು ಕವಲ ಗುಡ್ಡದ ಶ್ರೀ ಸಿದ್ದಯೋಗಿ ಅಮರೇಶ್ವರ ಸ್ವಾಮೀಜಿ, ಕಟಕೋಳ ಸಿದ್ರಾಯಜ್ಜನವರ ಮಠದ ಅಭಿನವ ಸಿದ್ದರಾಯ ಅಜ್ಜನವರು ಸಾನಿಧ್ಯ ವಹಿಸುವರು. ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಬಿಜೆಪಿ ಮುಖಂಡ ಚಿಕ್ಕರೇವಣ್ಣ ಉದ್ಘಾಟಿಸುವರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶಿಲ್ಪಾ ಕುಂದರಗೊಂಡ ಉಪನ್ಯಾಸ ನೀಡುವರು. ಪ್ರೊ| ವೈ.ವೈ, ಕೊಕ್ಕನವರ, ನಿಂಗಣ್ಣ ಗುಡ್ಡದ ಹಾಗೂ ರಾಗರಂಜಿನಿ ಕಲಾ ಬಳಗದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುರುಬರ ಸಂಘದ ರಾಜ್ಯ ಸಮಿತಿಯ ಮುಖಂಡ ಅಶೋಕ ಮೆಟಗುಡ್ಡ, ಸಮಾಜದ ಮುಖಂಡರಾದ ಮಲ್ಲಪ್ಪ ಸೋಮಗೊಂಡ, ವಿಠಲ ಜಟಗನ್ನವರ, ಸೋಮಶೇಖರ ಸಿದ್ಲಿಂಗಪ್ಪನವರ, ಸಿದ್ದಪ್ಪ ಗಡದಾರ, ರವಿ ಮೊರಬದ, ಬಸವರಾಜ ಕರಿಗಾರ, ಬಸವರಾಜ ಪ್ರಧಾನಿ, ಮಲ್ಲಿಕಾರ್ಜುನ ದುರ್ಗನ್ನವರ ಹಾಗೂ ಇತರರಿದ್ದರು. ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಮಕ್ಕನ್ನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.