ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಗುರುವಾರ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ರಾಜಮನೆತನ, ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದ ಸವದತ್ತಿ ಪುರಸಭೆ 1876ರಲ್ಲಿ ಪುರಸಭೆಯಾಗಿ ಇಂದಿಗೆ 150 ವರ್ಷ ಪೂರೈಸಿದೆ. ಅಲ್ಲದೆ, ನಗರದ ಜನಸಂಖ್ಯೆ ಕೂಡ 50 ಸಾವಿರ ಗಡಿ ದಾಟಿರುವ ಹಿನ್ನೆಲೆ 2023ರಲ್ಲಿಯೇ ನರಗಸಭೆಯನ್ನಾಗಿ ಮೇಲ್ದಗೇರಿಸಲು ಜಿಲ್ಲಾಡಳಿತವು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆ ಸರ್ಕಾರವು ಸಮೀಕ್ಷೆಯ ವರದಿ ಹಾಗೂ ಶಾಸಕ ವಿಶ್ವಾಸ ವಸಂತ ವೈದ್ಯ ಅವರು ಹೋರಾಟದ ಫಲವಾಗಿ ಗುರುವಾರ ಸಚಿವ ಸಂಪುಟದಲ್ಲಿ ಮೇಲ್ದರ್ಜೆಗೇರಿಸಿ ಆದೇಶಿಸುವ ಮೂಲಕ ಈ ಭಾಗದ ಜನರ ಕನಸು ನನಸಾಗಿಸಿದೆ.
ಕಳೆದ ನಾಲೈದು ವರ್ಷಗಳಿಂದ ಪುರಸಭೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗದಿರುವುದು ಹಾಗೂ ಸರ್ಕಾರದಿಂದ ಹೆಚ್ಚುವರಿ ಅನುದಾನ ಬರುತ್ತಿಲ್ಲ. ಈಗಿದ್ದ ಪುರಸಭೆಯ ಅನುದಾನದಲ್ಲಿ ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ ಮೂಲಭೂತ ಸೌಲಭ್ಯಗಳನ್ನು, ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವುಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ. ಅನುದಾನ ಬರುತ್ತದೆ. ಅಲ್ಲದೆ, ಆದಾಯ ಪ್ರಮಾಣ ಕೂಡ ದುಪ್ಪಟ್ಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೂಡಲೇ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಸದಸ್ಯರು ಒತ್ತಾಯಿಸಿದ್ದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಸವದತ್ತಿ ಯಲ್ಲಮ್ಮ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಮಾತು ಕೊಟ್ಟಂತೆ ನಡೆದುಕೊಂಡಿದ್ದೇನೆ. ನನ್ನ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸ್ಪಂದಿಸಿದ್ದು, ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸವದತ್ತಿ ನಗರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ವಿಶ್ವಾಸ ವಸಂತ ವೈದ್ಯ ಹೇಳಿದರು.
ಸವದತ್ತಿ ಯಲ್ಲಮ್ಮ ಪುರಸಭೆ ಅಧಿಕೃತವಾಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಸವದತ್ತಿ ಪುರಸಭೆ ಆವರಣದಲ್ಲಿ ಸಂಭ್ರಮಿಸಲಾಯಿತು.
ಈ ವೇಳೆ ಪುರಸಭೆ ಅಧಿಕಾರಿಗಳು, ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಪುರಸಭೆಯ ಎಲ್ಲಾ ಸದಸ್ಯರು, ಸ್ಥಳೀಯ ಮುಖಂಡರು, ಪುರಸಭೆ ಸಿಬ್ಬಂದಿಯವರು ಮತ್ತು ಯುವ ಮಿತ್ರರು ಉಪಸ್ಥಿತರಿದ್ದರು.