ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಹೇಮ ವೇಮ ಸೇವಾ ಸಮಿತಿಯ ಆಶ್ರಯದಲ್ಲಿ ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನ 174ನೇ ಮಾಸಿಕ ತತ್ವ ಚಿಂತನ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವೇಮನರ ವಚನ ಕುರಿತು ಬಾಗಲಕೋಟದ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ
ಚಿಂತನ ನಡೆಸಿ ಅವರು ಮಾತನಾಡಿದರು.
ನಾವಾಡುವ ಮಾತು, ಕೃತಿ ಒಂದಾದಾಗ ಮಾತ್ರ ನಮ್ಮ ಬದುಕನ್ನು ಸುಂದರಮಯ ವಾಗಿಸಿಕೊಳ್ಳಲು ಸಾಧ್ಯ. ಮಹಾತ್ಮರು, ಶರಣರು ಹಾಗೆ ಬದುಕಿದ್ದರಿಂದಲೇ ಅವರು ಪೂಜಿತರಾಗಿದ್ದಾರೆ ಎಂದ ಗುರೂಜಿ, ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ತಮ್ಮ ಆದರ್ಶ ಬದುಕಿನಿಂದಾಗಿ ವೈರಾಗ್ಯ, ಭಕ್ತಿ, ಜ್ಞಾನದ ಉತ್ತುಂಗ ಶಿಖರ ಮುಟ್ಟಿದರು ಎಂದರು.
ಮನುಷ್ಯ ಜೀವನ ಅತ್ಯಂತ ಪವಿತ್ರವಾಗಿದ್ದು, ಪರೋಪಕಾರ, ದಾನ-ಧರ್ಮದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಹಂಕಾರ, ಮಮಕಾರ ಬಿಟ್ಟು ಬದುಕಬೇಕು. ದಾನ, ಯಜ್ಞ, ತಪ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪುಣ್ಯಪ್ರಾಪ್ತವಾಗುತ್ತದೆ ಎಂದು ಹೇಳಿದ ಅವರು, ಕೊಡುವ ದಾನ ಫಲಾಪೇಕ್ಷೆಯಿಂದ ಕೂಡಿರದೇ ಅದು ಸತ್ಪಾತ್ರಕ್ಕೆ ಸಲ್ಲುವಂತಾದರೆ ಅದುವೇ ಶ್ರೇಷ್ಠ ದಾನವಾಗುತ್ತದೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ವೆಂಕಟೇಶ ಹುಣಸೀಕಟ್ಟಿ ಮಾತನಾಡಿ, ಮನುಷ್ಯ ಸೇವಾ ತತ್ಪರನಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಗುರುವಿನ ಮಾರ್ಗದರ್ಶನ ಪಡೆದು ಪರಿವರ್ತಿತನಾಗಿ ಆಧ್ಯಾತ್ಮ ಚಿಂತನೆಯನ್ನು ಅನುಸರಿಸಿ ಬದುಕನ್ನು ಅರಳಿಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ತಿಮ್ಮಾಪೂರ ಶಿವಾನಂದ ಮಠದ ಶ್ರೀ ಬಸವರಾಜ ಸ್ವಾಮೀಜಿ ಅವರು ಮಾತನಾಡಿದ, ಮನುಷ್ಯನಲ್ಲಿ ಸಹನೆಯೇ ಇಲ್ಲದ್ದರಿಂದಾಗಿ ಅಹಂಕಾರಿಯಾಗಿದ್ದಾನೆ. ಹಣದ ವ್ಯಾಮೋಹಕ್ಕೆ ಬಿದ್ದು ಸುಂದರ ಬದುಕನ್ನು ಕಳೆದುಕೊಳ್ಳುತ್ತಿದ್ದಾನೆ. ನೆತ್ತಿಯ ತೃಪ್ತಿಗಾಗಿ ಬದುಕುತ್ತಿಲ್ಲ. ಕೇವಲ ಹೊಟ್ಟೆಯ ತೃಪ್ತಿಗಾಗಿ ಜೀವನ ಮಾಡುತ್ತಿದ್ದಾನೆ. ಇದರಿಂದ ಹೊರಬಂದು ದಾನ, ಧರ್ಮ ಮಾಡಿ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಹೇಮ ವೇಮ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ ನಂದೆಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡದವರು ವೇಮನರ ವಚನ ಪಠಿಸಿದರು. ಜಿ.ಬಿ.ರಂಗನಗೌಡರ ಸ್ವಾಗತಿಸಿದರು. ರಮೇಶ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸನಗೌಡ ದ್ಯಾವನಗೌಡ್ರ ನಿರೂಪಿಸಿದರು.
ಹಲಗತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನ 174ನೇ ಮಾಸಿಕ ತತ್ವ ಚಿಂತನ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಮಾತನಾಡಿದರು.

WhatsApp Group
Join Now