
ಮಂಡ್ಯ ಆಲೆಮನೆಯಲ್ಲಿ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ತಿರುವು.! ಸ್ಕ್ಯಾನಿಂಗ್ ಯಂತ್ರ ಮಾರಾಟಗಾರರ ಬಂಧನ.!
ಮಂಡ್ಯ: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಆಲೆಮನೆಯಲ್ಲೂ ಲಿಂಗ ಪತ್ತೆ ಮಾಡುತ್ತಿದ್ದ ಹೀನಕೃತ್ಯ ಬೆಳಕಿಗೆ ಬಂದ ನಂತರ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಬೆಂಗಳೂರಿನ ಆವಿಷ್ಕಾರ್ ಬ್ರದರ್ಸ್ ಬಯೊಮೆಡಿಕಲ್ ಕಂಪನಿ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆವಿಷ್ಕಾರ್ ಬ್ರದರ್ಸ್ ಬಯೊಮೆಡಿಕಲ್ ಕಂಪನಿ ಮಾಲೀಕ ಲಕ್ಷ್ಮಣ ಗೌಡ ಮತ್ತು ಸಿದ್ದೇಶ್ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ. ಅಲ್ಟ್ರಾಸೌಂಡ್ ಹಾಗೂ ಇಮೇಜಿಂಗ್ ಸ್ಕ್ಯಾನಿಂಗ್ ಯಂತ್ರಗಳ ಮಾರಾಟ, ಮರು ಖರೀದಿ ಹಾಗೂ ದುರಸ್ತಿ ಸಂಬಂಧ ಆವಿಷ್ಕಾರ್ ಬ್ರದರ್ಸ್ ಬಯೊಮೆಡಿಕಲ್ ಕಂಪನಿ ಪರವಾನಗಿ ಪಡೆದಿತ್ತು. ಕಾನೂನು ಪ್ರಕಾರ ಪ್ರತಿಯೊಂದು ಸ್ಕ್ಯಾನಿಂಗ್ ಯಂತ್ರದ ಮಾರಾಟ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಆದರೆ, ಕಂಪನಿ ಮಾಲೀಕ ಹಾಗೂ ಮತ್ತಿತರರು ಮೂರು ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದು ಮತ್ತು ಈ ವ್ಯವಹಾರವನ್ನು ಮುಚ್ಚಿಟ್ಟಿರುವುದು ತನಿಖೆುಂದ ತಿಳಿದುಬಂದಿದೆ. ಕಳೆದ ವರ್ಷ ಅಕ್ಟೋಬರ್ 15ರಂದು ಒಂದು ಸ್ಕ್ಯಾನಿಂಗ್ ಯಂತ್ರವನ್ನು ಜಪ್ತಿ ಮಾಡಲಾಗಿತ್ತು. ಚನ್ನರಾಯಪಟ್ಟಣದಲ್ಲೂ ಭ್ರೂಣ ಹತ್ಯೆ ಸಂಬಂಧ ಪ್ರಕರಣ ದಾಖಲಾಗಿದ್ದು, ಮತ್ತೊಂದು ಯಂತ್ರವನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದೇಶನನ್ನು ಬಂಧಿಸಲಾಗಿದ್ದು, ಈತನ ಬಳಿಯೂ ಯಂತ್ರವೊಂದು ಸಿಕ್ಕಿದೆ ಎಂದು ಸಿಐಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಲಿಂಗ ಪತ್ತೆಗೆ ಯಂತ್ರ ಬಳಕೆ: ಆರೋಪಿ ಲಕ್ಷ್ಮಣ ಗೌಡ ಬಳಿ ಯಂತ್ರ ಖರೀದಿಸಿದ್ದ ಕೆಲವು ವೈದ್ಯರು ಹಾಗೂ ಇತರರು, ಅಕ್ರಮವಾಗಿ ಲಿಂಗ ಪತ್ತೆ ಮಾಡುತ್ತಿದ್ದರು. ಆಲೆಮನೆ ಮತ್ತು ಕೆಲವು ವಾಸದ ಮನೆಗಳಲ್ಲಿ ಯಂತ್ರಗಳು ಪತ್ತೆಯಾಗಿದ್ದವು. ತಮ್ಮದೇ ಜಾಲದ ಸದಸ್ಯರಿಂದ ಗರ್ಭಿಣಿಯರನ್ನು ಕರೆಸಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಹೆಣ್ಣು ಭ್ರೂಣವೆಂಬುದು ಗೊತ್ತಾಗುತ್ತಿದ್ದಂತೆ ಹತ್ಯೆ ಮಾಡಲಾಗುತ್ತಿತ್ತು. ಇದೇ ಜಾಲ 900ಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆ ಮಾಡಿರುವುದು ತನಿಖೆುಂದ ಗೊತ್ತಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.