
ಕನ್ನಡವೆಂದರೆ ಅದು ಬರಿ ಭಾಷೆಯಲ್ಲ. ಪ್ರತಿ ಕನ್ನಡಿಗನ ಎದೆಯಲ್ಲಿ ಅರಳಿ ಘಮಘಮಿಸುವ ಭಾವನೆಯ ಪುಷ್ಪ. ಆಚರಣೆಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂಬ ಮಾತಿನಂತೆ ನಿತ್ಯ ಭುವನೇಶ್ವರಿ ದೇವಿಯ ಪೂಜಿಸುವ ಮನೋಭಾವ ಕನ್ನಡಿಗರಲ್ಲಿ ಮೂಡುತ್ತಿರುವುದು ಬಹಳ ಸಂತೋಷದ ಸಂಗತಿ.2023 ರ ಕೊನೆಯ ದಿನವಾದರೂ ಕನ್ನಡ ರಾಜ್ಯೋತ್ಸವದ ಆಚರಣೆಗಳು ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಇಂದು ಡಿಸೆಂಬರ್ 31. ಮಹಾದೇವಪುರ ಕೈಗಾರಿಕಾ ವಲಯ ಸಿಂಗಯ್ಯನ ಪಾಳ್ಯ, ಬೆಂಗಳೂರು ಇಲ್ಲಿ ಶ್ರೀ ಗಜಾನನ ಪ್ರೆಸ್ ಕಾಪೊನೆಂಟ್ಸ್ ಮಾಲೀಕರಾದ ಶ್ರೀ ಮಹಾದೇವ ಸ್ವಾಮಿಯವರು “ಕನ್ನಡ ಕಟ್ಟುವ ಕೆಲಸ” ಎಂಬ ಕನ್ನಡಪರ ವೇದಿಕೆಯನ್ನು ನಿರ್ಮಿಸಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಇದು ಇವರು ನೆರವೇರಿಸುತ್ತಿರುವ 5ನೇ ವರ್ಷದ ಕಾರ್ಯಕ್ರಮ.ಇಂದಿನ ಕಾರ್ಯಕ್ರಮದ ಧ್ವಜಾರೋಹಣವನ್ನು ಮಹಾದೇವಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ಶ್ರೀ ವಿನೋದ್ ಕುಮಾರ್ ಅವರು ನೆರವೇರಿಸಿ ಕೊಟ್ಟರು. ಶ್ರೀ ಶರ್ಮಾ ಜಿ, ಸರಸ್ವತಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರು, ಸಿರಿಲ್ ಮತ್ತು ಫ್ರಾನ್ಸಿಸ್ ರವರು, ಮಹಾದೇವ ಸ್ವಾಮಿಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸಬ್ ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಅವರು ಮಾತನಾಡಿ ವಿಭಾಗವಾಗಿದ್ದ ಕರ್ನಾಟಕ ರಾಜ್ಯ ಒಂದುಗೂಡಿದ ಬಗೆಯನ್ನು, ಭಾಷಾವಾರು ಪ್ರಾಂತ್ಯಗಳ ವಿಂಗಡಣೆ, ಭಾಷೆಯ ಕುರಿತು ಅಭಿಮಾನ ಹೀಗೆ ಹಲವಾರು ವಿಚಾರಗಳ ಬಗ್ಗೆ ಮಾತನಾಡಿ ಕನ್ನಡವನ್ನು ಬೆಳೆಸಲು ಪ್ರತಿ ಕನ್ನಡಿಗನು ಮನಸ್ಸು ಮಾಡಬೇಕೆಂದು ಹೇಳಿದರು.” ಕನ್ನಡ ಕಟ್ಟುವ ಕೆಲಸ” ಈ ಕಾರ್ಯಕ್ರಮದ ಆಯೋಜನೆಯಲ್ಲಿ ಮಹದೇವಸ್ವಾಮಿಯವರ ಜೊತೆ ಕೈ ಜೋಡಿಸಿರುವ ಅಲೆಕ್ಸ್ ಆಂಡ್ರು, ಕೌಶಿಕ್ ಹಾಗೂ ಕೈಗಾರಿಕಾ ವಲಯದ ಎಲ್ಲಾ ತಂಡಕ್ಕೂ ಅವರು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಹಾಗೂ ಮುಂದಿನ ದಿನಗಳಲ್ಲಿ ಇದೇ ರೀತಿ ಹೆಚ್ಚಿನ ಕನ್ನಡಪರ ಕಾರ್ಯಕ್ರಮಗಳನ್ನು ಮಾಡಿ ಕನ್ನಡವನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಿದರು.


