ಪುರಸಭೆಯಿಂದ ಹಮ್ಮಿಕೊಂಡ ಬೀದಿಬದಿ ವ್ಯಾಪಾರಿಗಳ ಉಚಿತ ಆರೋಗ್ಯ ಶಿಬಿರ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆಯಿಂದ ಹಮ್ಮಿಕೊಂಡ ಬೀದಿಬದಿ ವ್ಯಾಪಾರಿಗಳ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಅಂಭಾಭವಾನಿ ಕಲ್ಯಾಣ ಮಂಟಪದಲ್ಲಿ ಜರಗಿತು. ಈ ಸಂದರ್ಭದಲ್ಲಿ ಪುರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಗೀತಾ ಬೆಳಗಲಿ ಮಾತನಾಡಿದ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ. ಸ್ವನಿಧಿ ಯೋಜನೆುಂದ 50 ಸಾವಿರ ರೂ. ವರಗೆ ಸಾಲ ಸೌಲಭ್ಯಗಳಿದ್ದು, ಪಿ.ಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಮೊದಲನೇ ಹಂತದಲ್ಲಿ 10 ಸಾವಿರ ವ್ಯಾಪಾರ ಸಾಲ ನೀಡಲಾಗುತ್ತಿದೆ. ಅದನ್ನು ಸಕಾಲದಲ್ಲಿ ಭರಣಾ ಮಾಡಿದರೆ 2ನೇ ಹಂತದಲ್ಲಿ 20 ಸಾವಿರ ಹಾಗೂ ಮೂರನೇ ಹಂತದಲ್ಲಿ 50 ಸಾವಿರ ರೂ. ವರಗೆ ಬ್ಯಾಂಕಿನಿಂದ ಸಾಲ ನೀಡಲಾಗುತ್ತಿದೆ. ಸಕಾಲದಲ್ಲಿ ಮರುಪಾವತಿ ಮಾಡಿ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಹುಸೇನಭಾಷಾ ಮಹ್ಮದಲಿ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಈಗಾಗಲೆ ರಾಮದುರ್ಗ ಪಟ್ಟಣದಲ್ಲಿ 670 ಬೀದಿ ಬದಿ ವ್ಯಾಪಾರಸ್ಥರು ನೊಂದಣಿ ಮಾಡಿಕೊಂಡಿದ್ದು, 540 ವ್ಯಾಪಾರಿಗಳಿಗೆ ಬ್ಯಾಂಕಿನಿಂದ ಸಾಲ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಐನಾಪೂರ ಅವರು ಕುಷ್ಟ ರೋಗ ಹಾಗೂ ಅದರ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರೆ ಆರೋಗ್ಯ ಆಪ್ತ ಸಮಾಲೋಚಕ ಶಂಕರ ಲಕಾಟೆ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಕೇಂದ್ರ ಸರಕಾರದ ಸಾಮಾಜಿಕ ಭದ್ರತೆ ವಿಮಾ ಯೋಜನೆ ಹಾಗೂ ಡಿಜಿಟಲ್ ಬ್ಯಾಂಕ ವ್ಯವಹಾರ ಬಗ್ಗೆ ಮಾಹಿತಿ ನೀಡಿದರು.
ಡಾ| ಶಶಿಧರ, ಅಲ್ಲಾಭಕ್ಷ ಭಾಗವಾನ, ಸಂಕಮ್ಮ ಮುರುಡಿ, ಶೃತಿ ಅರಳಿಮಟ್ಟಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಬೀದಿಬದಿ ವ್ಯಾಪಾರಿಗಳ ಆರೋಗ್ಯ ತಪಾಸಣೆ ಮಾಡಿದರು. ಶಾಖಾಂಭರಿ ಜನಪದ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶನ ನಡೆಸಿದರು.
ಪುರಸಭೆಯ ಆರೋಗ್ಯ ನಿರೀಕ್ಷಕ ಚಂದನ ಪಾಟೀಲ ಸ್ವಾಗತಿಸಿದರು. ನೀಲಮ್ಮ ಹಿರೇಮಠ ನಿರೂಪಿಸಿದರು. ಅಂಕಿತಾ ಹಲ್ಯಾಳ ವಂದಿಸಿದರು.
