ಬೆಂಗಳೂರು: ನೀರಿನ ಸಂರಕ್ಷಣೆ ಹಾಗೂ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಂಡಳಿಯೊಂದಿಗೆ ಕೈಜೋಡಿಸಿ ಎಂದು ಪ್ಲಂಬರ್‌ಗಳಿಗೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು. ಜಯನಗರದ ಸರ್ ಎಂ.ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1000 ಲೀಟರ್ ನೀರನ್ನು ಮನೆಗಳಿಗೆ ಸರಬರಾಜು ಮಾಡಲು ಮಂಡಳಿಗೆ ಸುಮಾರು 95 ರೂ.ಗಳ ವೆಚ್ಚವಾಗುತ್ತದೆ. ಆದರೆ ಜನರಿಗೆ ನಾವು ರಿಯಾಯಿತಿ ದರವಾದ 45 ರೂ.ಗಳಲ್ಲಿ ನೀರನ್ನು ಒದಗಿಸುತ್ತಿದ್ದೇವೆ. ನೀರಿನ ಸಂರಕ್ಷಣೆಗೆ ನಮ್ಮ ಪ್ರಥಮ ಆದ್ಯತೆ ಆಗಬೇಕಾಗಿದೆ ಎಂದರು. ಪ್ಲಂಬರ್‌ಗಳು ಜಲಮಂಡಳಿಯ ಮಿತ್ರರಾಗಿ ಕಾರ್ಯನಿರ್ವಹಿಸಬೇಕು.
ತಾವು ಕಾರ್ಯನಿರ್ವಹಿಸುತ್ತಿರುವಂತಹ ವ್ಯಾಪ್ತಿಯಲ್ಲಿ ಇರುವಂತಹ ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಲು ಏರಿಯೇಟರ್ ಆಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಈಗಾಗಲೇ ನಾವು ಇವುಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದೇವೆ, ಜನರು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳುವಂತೆ ಮನವೊಲಿಸುವುದರಲ್ಲಿ ನಿಮ್ಮ ಪಾತ್ರ ಹಿರಿದಾಗಿದೆ ಎಂದರು. ಜಲಮಂಡಳಿಯ 11 ಸಾವಿರ ಕೊಳವೆಬಾವಿಗಳನ್ನು ಸುಸ್ಥಿಯಲ್ಲಿಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ.
ಇದಕ್ಕಾಗಿ ಕೊಳವೆಬಾವಿಗಳ ರಿಪೇರಿಯನ್ನು ಯುದ್ಧೋಪಾದಿಯಲ್ಲಿ ಮಾಡಬೇಕು. ಹಾಗೆಯೇ. ಕಡಿಮೆ ನೀರು ದೊರೆಯುತ್ತಿರುವ ಕೊಳವೆಬಾವಿಗಳನ್ನು ಇಂಗುಗುಂಡಿಗಳನ್ನಾಗಿ ಪರಿವರ್ತಿಸುವ ಹಾಗೂ ಬತ್ತಿಹೋಗಿರುವ ಕೊಳವೆಬಾವಿಗಳನ್ನು ಅಂತರ್ಜಲ ಮರುಪೂರಣಕ್ಕೆ ಬಳಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.
ಮಳೆ ಕೊಯ್ದು ಹಾಗೂ ಮರುಪೂರಣಕ್ಕೆ ಪ್ಲಂಬರ್‌ಗಳು ಆದ್ಯತೆ ನೀಡಬೇಕು. ನಿಯಮಗಳ ಅನುಸಾರ ಕಟ್ಟಡಗಳಲ್ಲಿ ಮಳೆ ನೀರು ಕೊಯ್ದು ಹಾಗೂ ಅವನ್ನು ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಿಸಿಕೊಳ್ಳುವಂತೆ ಜನರ ಮನವೊಲಿಸುವುದು ಆದ್ಯತೆ ಆಗಿರಬೇಕು ಎಂದರು. ಈ ಸಂದರ್ಭದಲ್ಲಿ ಮಂಡಳಿಯ ಮುಖ್ಯ ಎಂಜಿನಿಯರ್‌ಗಳಾದ ಎಸ್.ವಿ.ವೆಂಕಟೇಶ್, ಜಯಶಂಕರ್, ಎಂಜನಿಯರ್‌ಗಳು ಹಾಗೂ ಅಧಿಕಾರಿಗಳು ಇದ್ದರು.



