12 August 2026
Advertisement
ರಾಜ್ಯ

ಪ್ರಾಸಿಕ್ಯೂಷನ್‌ ಪಾಲಿಟಿಕ್ಸ್!

WhatsApp Group Join Now

ಬೆಂಗಳೂರು: ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮಕ್ಕೆ ಪ್ರತಿಯಾಗಿ ರಾಜ್ಯಪಾಲರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ರಾಜಕೀಯ ಹೋರಾಟವನ್ನು ಸರಕಾರ ತೀವ್ರಗೊಳಿಸಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಬಾಕಿ ಇರುವ ಪ್ರಕರಣಗಳಲ್ಲೂ ಪ್ರಾಸಿಕ್ಯೂಷನ್‌ಗೆ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ತಾಕೀತು ಮಾಡುವ ತೀರ್ಮಾನವನ್ನು ಸಂಪುಟ ಸಭೆ ಗುರುವಾರ ಕೈಗೊಂಡಿದೆ.

ಆ ಮೂಲಕ, ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ BJP-JDS ಪಡ್ಯಂತ್ರದ ವಿರುದ್ಧ ಕಾನೂನು ಮತ್ತು ರಾಜಕೀಯ ಹೋರಾಟ ನಡೆಸುತ್ತೇವೆ ಎಂಬ ಘೋಷಣೆಯ ಹಾದಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸಂಪುಟ ಮುಂದುವರಿದಿದೆ.

CM ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ಸಂಪುಟದ ತೀರ್ಮಾನವನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ”ಈ ನಾಲ್ಕೂ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಶೀಘ್ರ ಪೂರ್ವಾನುಮೋದನೆ ಹಾಗೂ ಅನುಮೋದನೆ ನೀಡಬೇಕು. ಭ್ರಷ್ಟಾಚಾರ ತಡೆ ಕಾಯಿದೆಯಡಿ ತನಿಖಾ ಸಂಸ್ಥೆಗಳಿಂದ ಆರೋಪ ಪಟ್ಟಿ ಸಲ್ಲಿಕೆ ಹಂತದಲ್ಲಿರುವ ಈ ಪ್ರಕರಣಗಳಲ್ಲಿ ನ್ಯಾಯ ಪ್ರಕ್ರಿಯೆ ಯನ್ನು ಸುಗಮಗೊಳಿಸುವ ಉದ್ದೇಶದಿಂದ ಇದು ತುರ್ತು ಅಗತ್ಯ ಎಂದು ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ನಿರ್ಧರಿಸಿತು. ಈ ತೀರ್ಮಾನಕ್ಕೆ ರಾಜ್ಯಪಾಲರು ಬದ್ದರಾಗಿ ನಡೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಸಚಿವರು ಹೇಳಿದರು.

ಪ್ರಕರಣಗಳ ವಿವರ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ, ಸಿಆ‌ರ್ ಪಿಸಿ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್ ಗಳಡಿ ಲೋಕಾಯುಕ್ತ ಎಸ್ ಐಟಿ ಸಲ್ಲಿಸಿದ್ದ ಆರೋಪ ಪಟ್ಟಿಗೆ ರಾಜ್ಯಪಾಲರು 2024ರ ಜು. 29 ರಂದು ಸ್ಪಷ್ಟಿಕರಣ ಕೇಳಿದ್ದರು. ಅದರಂತೆ ಆ.16ರಂದು ಎಸ್ಐಟಿ ರಾಜ್ಯಪಾಲರಿಗೆ ಸ್ಪಷ್ಟಿಕರಣ ನೀಡಿದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್ 17(ಎ) ಅಡಿ ಪ್ರಾಸಿಕ್ಯೂಷನ್‌ಗೆ ಲೋಕಾಯುಕ್ತರು 2021ರ ನ. 9ರಂದು ಪೂರ್ವಾನುಮೋದನೆ ಕೋರಿದ್ದಾರೆ. ಮತ್ತೊಬ್ಬ ಮಾಜಿ ಸಚಿವ ನಿರಾಣಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 17 (ಎ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ನಾನಾ ಸೆಕ್ಷನ್ಗಳಡಿ 2024ರ ಜೂ.26ರಂದು ಪೂರ್ವಾನುಮೋದನೆ ಕೇಳಲಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧವೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಹಾಗೂ ಬಿಎನ್ಎಸ್ ನ ಹಲವು ಸೆಕ್ಷನ್ ಗಳಡಿ ಆರೋಪ ಪಟ್ಟಿ ಸಲ್ಲಿಕೆಗೆ ರಾಜ್ಯಪಾಲರ ಅನುಮೋದನೆ ಕೇಳಲಾಗಿದೆ.

About The Author