
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಿಂದ ಬಾಳೆಕುಂದ್ರಿ ಕಾಲುವೆಯವರೆಗೆ ರಸ್ತೆ ತುಂಬ ಗುಂಡಿಮಯ ಗ್ರಾಮದ ಕೆಲ ಪ್ರಮುಖ ರಸ್ತೆಗಳು ಸೇರಿದಂತೆ ಒಳ ರಸ್ತೆಗಳಲ್ಲಿ ರಸ್ತೆಗಳನ್ನು ಹುಡುಕಿ ವಾಹನ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಗೆ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಅಸಾಧ್ಯದ ಪರಿಸ್ಥಿತಿ ತಂದೊಡ್ಡಿವೆ. ನೀರು ಹರಿದುಹೋಗಲು ಜಾಗವಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ. ರಸ್ತೆಗಳು ತೀವ್ರ ಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳು ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ.
ರಸ್ತೆ ಅಭಿವೃದ್ಧಿ ಕಂಡು ಸುಮಾರು 10-15 ವರ್ಷಗಳೇ ಕಳೆದಿದೆ. ಇದುವರೆಗೂ ರಸ್ತೆ ಅಭಿವೃದ್ಧಿ ಕಂಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ಬಾರಿ ತೊಂದರೆಯಾಗಿದೆ. ಹಲವಾರು ಬಾರಿ ಸ್ಥಳಿಯ ಶಾಸಕರಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಶಾಸಕರದ್ದು ಬರಿ ಭರವಸೆಯಾಗಿದೆ: ರಸ್ತೆ ಹದಗೆಟ್ಟಿರುವ ಕಾರಣ ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಹಾಗೂ ವಾಹನ ಸವಾರರು ಬಾರಿ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಲ್ಪ ಯಾಮಾರಿದರೆ ಯಮಲೋಕನ ದರ್ಶನ ಗ್ಯಾರಂಟಿ.ಅಲ್ಲದೆ, ಎಷ್ಟೋ ಬಾರಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ವೇಳೆ ಆಯ ತಪ್ಪಿ ಬಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಯೂ ಸಹ ನಡೆದಿದೆ. ರಸ್ತೆಯಲ್ಲಿ ಸಂಚರಿಸುವ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಯನ್ನು ಅಭಿವೃದ್ಧಿ ಮಾಡಿಸಿಕೊಡು ವಂತೆ ಸ್ಥಳಿಯ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ
ಮನವಿ ಮಾಡುತ್ತಿದ್ದರೂ ಅವರ ಭರವಸೆ ಮಾತ್ರ ನೀಡುತ್ತಾರೆ. ಆದರೆ, ಅಭಿವೃದ್ಧಿ ಕೆಲಸ ಮಾತ್ರ ಮಾಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


