ಬೈಲಹೊಂಗಲ: ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ, ಉರ್ದು ಸಂಪನ್ಮೂಲ ಕೇಂದ್ರ ಬೈಲಹೊಂಗಲ ಮತ್ತು ಸರ್ಕಾರಿ ಉರ್ದು ನಂ.2 ಶಾಲೆ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಉರ್ದು ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀ ರವಿ ಹಿರೇಮಠ ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಕೂಡ ಮುಖ್ಯವಾಹಿನಿಗೆ ಬಂದು ಸಮಾನವಾಗಿ ಕಲಿಯಲು ಸರ್ಕಾರ ವಿವಿಧ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆ. ಕಥೆ ಹೇಳುವಿಕೆ, ರಸಪ್ರಶ್ನೆ, ಕೈಬರಹ ಮುಂತಾದ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರಲು ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದರು. ಮಕ್ಕಳ ಈಗಾಗಲೇ ಪಡೆದ ಕಲಿಕೆಯನ್ನು ಪಾಲಕರಿಗೆ ಪ್ರದರ್ಶಿಸಲು ಇದು ಉತ್ತಮ ವೇದಿಕೆ ಆಗಿದ್ದು, ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳ ಮೂಲಕ ಮಕ್ಕಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಎಸ್.ಡಿ. ಗಂಗಣ್ಣವರ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಬಿ.ಎಸ್. ಪಕ್ಕೀರಸ್ವಾಮಿಮಠ, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಎಂ.ಆರ್. ಭೋವಿ, ನೌಕರರ ಸಂಘದ ಕಾರ್ಯದರ್ಶಿ ಶ್ರೀ ಚಂದ್ರು ಭಜಂತ್ರಿ, ಖಜಾಂಚಿ ಶ್ರೀ ಪಿ.ಪಿ. ಸೊಂಟಕ್ಕೆ ಹಾಗೂ ಶ್ರೀ ಗುರುರಾಜ ಬೋಳನ್ನವರ ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ಶ್ರೀ ಜಾವೀದ್ ಗಡಹಿಂಗ್ಲಜ ಅವರು ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಬಾಗೇವಾಡಿ, ದಾಸ್ತಿಕೊಪ್ಪ ಹಾಗೂ ಕುರುಣಕೊಪ್ಪ ಹಾಜರಿದ್ದರು. ಪುರಸಭಾ ಸದಸ್ಯೆ ಶ್ರೀಮತಿ ದಿಲ್ಸ್ಯಾನ ಭಾನು ನಧಾಪ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಶ್ರೀಮತಿ ಪಿ.ವೈ. ಶಿಂತ್ರಿ ಮಾತನಾಡಿದರು. ಎಸ್.ಡಿ. ಗಂಗಣ್ಣವರ ಅವರು ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಪಾಲಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು. ಎಂ.ಆರ್. ಭೋವಿ ಅವರು ಮಾತನಾಡಿ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಉದಾಹರಣೆ ನೀಡಿ, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ರಾಷ್ಟ್ರದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಮಕ್ಕಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮವನ್ನು ಸ್ಥಳೀಯ ಶಾಲೆಯ ಶಿಕ್ಷಕಿ ಶ್ರೀಮತಿ ಕೆ.ಎ. ಮಕಾನದಾರ ಅವರು ನಿರ್ವಹಿಸಿದರು. ಅಜ್ಜಪ್ಪ ಅಂಗಡಿ ಅವರು ಸ್ವಾಗತಿಸಿದರು. ಉರ್ದು ಕಲಿಕಾ ಹಬ್ಬದ ಉಸ್ತುವಾರಿಗಳು ಹಾಗೂ ಸಂಘಟಕರಾದ ಶ್ರೀ ಎಂ.ಜಿ. ನದಾಫ್ ಅವರು ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ, ಅತಿಥಿಗಳಿಗೆ ಹಾಗೂ ಗಣ್ಯರಿಗೆ ಉತ್ತಮ ರೀತಿಯ ಊಟೋಪಚಾರ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪಾಲಕರು ಆಟಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಮಕ್ಕಳು ಕಲಿಕೆಯೊಂದಿಗೆ ಹೊಸ ಅನುಭವ ಪಡೆದಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿಆರ್‌ಪಿ ಗಳಾದ ಶ್ರೀಮತಿ ಸುನಂದಾ ಜನ್ಮಟ್ಟಿ, ಶ್ರೀ ಎಸ್.ಎಸ್. ಪಾಟೀಲ, ಶ್ರೀ ರವಿ ತುರಮರಿ, ಶ್ರೀ ಗೌಡಪ್ಪ ಪಾಟೀಲ, ಶ್ರೀ ಎಸ್.ಸಿ. ಹಿರೇಮಠ ಸೇರಿದಂತೆ ಇತರೆ ಶಾಲೆಗಳ ಮುಖ್ಯ ಶಿಕ್ಷಕರು, ಮಾರ್ಗದರ್ಶಿ ಶಿಕ್ಷಕರು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.
ಬೈಲಹೊಂಗಲದಲ್ಲಿ ತಾಲೂಕು ಮಟ್ಟದ ಉರ್ದು ಕಲಿಕಾ ಹಬ್ಬ

WhatsApp Group
Join Now


