ಬೆಳಗಾವಿ ಪ್ರತಿವರ್ಷದಂತೆ ಈ ಬಾರಿಯು ಜನವರಿ 12 ಹಾಗೂ 13 ರಂದು ಅದ್ಧೂರಿಯಾಗಿ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಆಚರಿಸಲಾಗುವುದು ಎಂದು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಹೇಳಿದರು.
ಸಂಗೋಳ್ಳಿ ಗ್ರಾಮದ ಸ್ಮಾರಕ ಭವನದಲ್ಲಿ ಶುಕ್ರವಾರ ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2026ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಯಣ್ಣನ ಇತಿಹಾಸವನ್ನು ವಿಶ್ವಕ್ಕೆ ತಿಳಿಸುವ ಕಾರ್ಯವನ್ನು ಸರಕಾರದಿಂದ ಮಾಡಲಾಗುತ್ತಿದೆ. ಜನವರಿ 12 ಹಾಗೂ 13 ರಂದು ಎರಡು ದಿನಗಳ ಕಾಲ ಜರುಗಲಿರುವ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಭಾಗಿಯಾಗುವುದರ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಉತ್ಸವದ ಮೆರವಣಿಗೆಯಲ್ಲಿ ಉತ್ತಮ ಜಾನಪದ ಕಲಾತಂಡಗಳನ್ನು ಆಯ್ಕೆ ಮಾಡಲಾಗುವುದು. ಈ ಬಾರಿ ಕುಸ್ತಿ ಪಂದ್ಯಾವಳಿಗಳ ಜೋತೆಗೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
ಉತ್ಸವದ ದಿನಗಳಂದು ತಡರಾತ್ರಿವರೆಗೆ ಅಂಗಡಿ ಮುಗ್ಗಟ್ಟು ತೆರೆದಿಡಲು ಸೂಚನೆ ನೀಡಲಾಗುವುದು. ಉತ್ಸವದ ಪ್ರಯುಕ್ತ ಮದ್ಯ ಮಾರಾಟ ನಿಷೇಧಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಶಾಲೆಗಳ ವಿವರವನ್ನು ಶಾಲಾ ಶಿಕ್ಷಣ ಇಲಾಖೆಗೆ ಒದಗಿಸಬೇಕು ಎಂದು ಹೇಳಿದರು.
ರಾಯಣ್ಣನ ಉತ್ಸವ ಗ್ರಾಮಸ್ಥರ ಉತ್ಸವವಾಗಿದ್ದು, ಗ್ರಾಮಸ್ಥರೆಲ್ಲರೂ ಸೇರಿ ಉತ್ಸವ ಯಶಸ್ವಿಗೊಳಿಸಬೇಕು. ಅಲ್ಲದೇ ಉತ್ಸವದ ದಿನಗಳಂದು ಆಯೋಜಿಸಲಾಗುವ ವಿಚಾರ ಸಂಕೀರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶಾಸಕರಾದ ಮಹಾಂತೇಶ ಕೌಜಲಗಿ ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಎರಡು ದಿನಗಳ ಕಾಲ ಜರುಗಲಿರುವ ರಾಯಣ್ಣನ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು. ಈ ಉತ್ಸವ ಯಶಸ್ವಿಯಾಗಬೇಕಾದರೆ ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಕುರಿತು ಉತ್ಸವಗಳನ್ನು ಆಯೊಜಿಸಲಾಗುತ್ತಿದೆ. ಸಂಗೋಳ್ಳಿ ರಾಯಣ್ಣನ ಉತ್ಸವದ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಲಾಗುವದು. ಈ ಸಮಿತಿಗಳಲ್ಲಿ ಅಧಿಕಾರಿಗಳ ಜೊತೆ ಗ್ರಾಮಸ್ಥರನ್ನು ಸದಸ್ಯರನ್ನಾಗಿ ನೇಮಿಸಲಾಗುವದು.
ಕಳೆದ ಬಾರಿಯಂತೆ ಈ ಬಾರಿಯೂ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗುವುದು. ಕಲಾತಂಡಗಳ ಆಯ್ಕೆಗೆ ಸಂಬಂಧಿಸಿದಂತೆ, ಉಪಸಮಿತಿಯ ಸದಸ್ಯರು, ಗ್ರಾಮದ ಮುಖಂಡರು ಗಳೊಂದಿಗೆ ಚರ್ಚಿಸಿ ಉತ್ತಮ ಕಲಾ ತಂಡಗಳ ಆಯ್ಕೆ ಮಾಡಬೇಕು. ಕಾರ್ಯಕ್ರಮದ ಕುರಿತು ಹೆಚ್ಚನ ಪ್ರಚಾರ ನೀಡಬೇಕು. ವಿಚಾರ ಸಂಕೀರಣ ಆಯೋಜನೆಗೆ ಸಂಬಂಧಿಸಿದಂತೆ ವಿಷಯಗಳ ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ತಿಳಿಸಿದರು.
ಸಭೆಯಲ್ಲಿ ಸಂಗೋಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರೂಪಾ ಚಚಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಾಧಿಕಾರದ ಬೈಲಹೊಂಗಲ್ ತಾಲೂಕು ಅಧ್ಯಕ್ಷರಾದ ಮಹಾಂತೇಶ ಕಳ್ಳಿಬಡ್ಡಿ, ಗ್ರಾಮಪಂಚಾಯತ ಸದಸ್ಯರುಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ,
ಬೈಲಹೊಂಗಲ್ ಡಿ.ವೈ.ಎಸ್.ಪಿ ವೀರಯ್ಯ ಹಿರೇಮಠ, ತಹಶಿಲ್ದಾರರುಗಳಾದ ಹನುಂಮತ ಶಿರಹಟ್ಟಿ, ಕಲಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದ ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಉತ್ಸವದ ಯಶಸ್ವಿಗಾಗಿ ರಚಿಸಲಾದ ಉಸಮಿತಿಗಳಿಗೆ ಸಂಗೊಳ್ಳಿ ಗ್ರಾಮದ ಕನಿಷ್ಠ ನಾಲ್ಕು ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಬೇಕು. ಉತ್ಸವ ಮೂರು ದಿನ ಜರುಗಬೇಕು. ಉತ್ಸವದ ಉದ್ಘಾಟನೆಗೆ ಎಲ್ಲ ಜನಪ್ರತಿನಿಧಿಗಳು ಹಾಜರಾಗಬೇಕು. ರಾಯಣ್ಣನ ಜ್ಯೊತಿ ರಾಜ್ಯಾದ್ಯಂತ ಸಂಚರಿಸಬೇಕು. ಉತ್ಸವದ ಪ್ರಯುಕ್ತ ಗ್ರಾಮವನ್ನು ಸ್ವಚ್ಛಗೊಳಿಸಿ ದೀಪಾಲಂಕಾರ, ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿ ಆಯೋಜನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾ ತಂಡಗಳು ಕೊನೆಯ ವರೆಗೂ ಮೆರವಣಿಗೆ ಜೊತೆ ಸಾಗಬೇಕು. ರಾಯಣ್ಣನ ಜ್ಯೋತಿ ಜಿಲ್ಲಾದ್ಯಂತ ಸಂಚರಿಸಬೇಕು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಅನೇಕ ಸಲಹೆಗಳನ್ನು ಸಭೆಗೆ ನೀಡಿದರು.



