ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಕಾಶ ತೆವರಿ ಮಾತನಾಡುತ್ತಾ ಸೋಲಾರ ವಿದ್ಯುಚ್ಛಕ್ತಿ ಉತ್ಪಾದನಾ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನೆಗಳಿಂದಾಗಿ ಕಡಿಮೆ ವೆಚ್ಚದಲ್ಲಿ ಸೋಲಾರ ಘಟಕಗಳನ್ನು ಅಳವಡಿಸಲು ಸಾಧ್ಯವಾಗಿದೆ.
ಜನ ಸಾಮಾನ್ಯರು ವಿದ್ಯುತ್ ಸ್ವಾವಲಂಬನೆ ಹೊಂದಲು ಸರಕಾರ ನೀಡುತ್ತಿರುವ ರೂ. 78,000/- ವರೆಗಿನ ಸಬ್ಸಿಡಿ ಯಿಂದಾಗಿ ಇದೊಂದು ರಾಷ್ಟ್ರವ್ಯಾಪಿ ಆಂದೋಲನವಾಗಿ ಹೊರಹೊಮ್ಮುತ್ತಿದ್ದು, ಇನ್ನೂ ಹೆಚ್ಚು ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯವು ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿರುವುದು ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಭಾಲಚಂದ್ರ ಜಾಬಶೆಟ್ಟಿ, ಗ್ರೀನಲ್ಯಾಂಡ ಬಯೋಟೆಕ್, ಹಾಗೂ ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ರವರ ಶ್ರಮ ಸ್ತುತ್ಯಾರ್ಹವಾಗಿದೆಯೆಂದರು.
ಅಭಿಯಾನದ ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮನೆ ಮೇಲ್ಛಾವಣಿ ವಿದ್ಯುತ್ ಉತ್ಪಾದನಾ ಘಟಕಗಳು ಹಾಗೂ ಸೋಲಾರ ಪಂಪಸೆಟ್ ಗಳ ಅಳವಡಿಕೆ ಕುರಿತು ರೈತರಲ್ಲಿ ಜಾಗೃತಿಯನ್ನುಂಟು ಮಾಡಲು ಮತ್ತು ತಾಂತ್ರಿಕ ಬೆಂಬಲ ನೀಡಲು ಪ್ರಥಮ ಹಂತದಲ್ಲಿ ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಜಾಗೃತಾ ಸಭೆಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಪ್ರಾತ್ಯಕ್ಷಿಕೆ ಮುಂತಾದವುಗಳನ್ನು ಏರ್ಪಡಿಸಿ ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗುವುದೆಂದು ನುಡಿದರು.
ಸಿವಿಲ್ ಎಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಮ್.ಆರ್.ಪಾಟೀಲ ಸ್ವಾಗತಿಸಿದರು.
ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರೊಫೆಸರ್ ಗಳು, ಬೊಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



