ವಿಜಯಪುರ ನಟನೆಯ ಮೂಲಕ ಜೀವನ ಮೌಲ್ಯಗಳನ್ನು ಬೋಧಿಸಿದ ವರನಟ ಡಾ.ರಾಜಕುಮಾರ್ ಕನ್ನಡದ ಶ್ರೇಷ್ಠ ರತ್ನ ಎಂದು
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಡಾ.ರಾಜ್ ಕುಮಾರ ಜನ್ಮದಿನೋತ್ಸವ ಹಾಗೂ ಅವರ ಗೀತೆಗಳ ಗಾಯನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ರಾಜಕುಮಾರ್ ಅವರು ತಮ್ಮ ಚಿತ್ರದ ಮೂಲಕ ಸಾಮಾಜಿಕ ಜಾಗೃತಿ ಸಂದೇಶ ಸಾರಿದರು, ಡಾ.ರಾಜಕುಮಾರ್ ಅವರ ಸರಳತೆ, ಶ್ರೇಷ್ಠತೆ ಎಲ್ಲರಿಗೂ ಸ್ಪೂರ್ತಿ ಎಂದರು.
ಬೇರೆ ಭಾಷೆಯಲ್ಲಿ ನಟಿಸದೇ ಕನ್ನಡದಲ್ಲಿ ಮಾತ್ರ ನಟಿಸಿ ವರನಟ.
ಉಪನ್ಯಾಸ ಮಂಡಿಸಿದ
ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ,
ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸುವ ಅವಕಾಶ ಬಂದು ಬಹುಭಾಷಾ ನಟರಾಗಿ ಮಿಂಚುವ ಅವಕಾಶ ಬಂದರೂ ಸಹ ಅದನ್ನು ನಿರಾಕರಿಸಿ ಕನ್ನಡ ಚಿತ್ರಗಳಲ್ಲಿರುವೆ ನಟಿಸುವೆ ಎಂಬ ಅವರ ನಿಲುವೇ ಅವರ ಕನ್ನಡಾಭಿಮಾನಕ್ಕೆ ದಿವ್ಯ ನಿದರ್ಶನ ಎಂದರು. ಡಾ.ರಾಜ್ ಅವರ ಚಿತ್ರ ನೋಡಿದಾಗ ನಾವೇ ಪಾತ್ರ ಮಾಡುತ್ತಿದ್ದೇವೆ ಎಂದು ಭಾಸವಾಗುತ್ತದೆ, ಜೀವನದ ಪಾಠ ಅಲ್ಲಿರುತ್ತದೆ ಎಂದರು.
ಗೋಕಾಕ್ ಚಳವಳಿಗೆ ಒಂದು ಹೊಸ ಚೈತನ್ಯ ತುಂಬಿ ಅದರ ಯಶಸ್ವಿ ಹೋರಾಟದಲ್ಲಿಯೂ ಡಾ.ರಾಜ್ ಅವರ ಪಾತ್ರ ಅನನ್ಯ ಎಂದರು.
ಡಾ.ರಾಜ್ ಕುಮಾರ್ ಎಂಬ ಪದಕ್ಕೆ ನಿಜಾರ್ಥ ನೀಡಿದ ರಾಜಕುಮಾರ ಅವರ ವ್ಯಕ್ತಿತ್ವ ಹಿಮಾಲಯ ಪರ್ವತಕ್ಕಿಂತಲೂ ಎತ್ತರ, ಒಂದು ಸಮಾಜವನ್ನು ಸರಿದಾರಿಗೆ ಮುನ್ನಡೆಸುವ ದಿವ್ಯ ಶಕ್ತಿಯಾಗಿದ್ದರು.
ಡಾ.ರಾಜ್ ಅಪ್ಪಟ ಕನ್ನಡಪ್ರೇಮಿ, ಕನ್ನಡಕ್ಕಾಗಿ ಹೋರಾಟ ಮಾಡಿದ ಮಹಾನ್ ನಟ ಎಂದು ಬಣ್ಣಿಸಿದರು.
ವಿಭಿನ್ನ ವ್ಯಕ್ತಿತ್ವ ಸ್ವರೂಪದ ತ್ರಿ- ಪಾತ್ರಗಳಲ್ಲಿ ಆ ಪಾತ್ರಕ್ಕೆ ತಕ್ಕಂತೆ ಅನನ್ಯ ನಟನೆ ಮಾಡುವ ನಟನಾ ಪಾಂಡಿತ್ಯ ಅವರಲ್ಲಿತ್ತು ಎಂದರು.
ಹಿಂದಿ ಮೇರು ನಟ ಅಮಿತಾಬ್ ಬಚ್ಚನ್ ಸಹ ನಟನೆಯ ಬಗ್ಗೆ ಡಾ.ರಾಜ್ ಕುಮಾರ ಅವರನ್ನು ಭೇಟಿಯಾಗಿ ಸಲಹೆ ಪಡೆದುಕೊಂಡಿದ್ದು ಡಾ.ರಾಜ್ ಅವರ ನಟನಾ ಪ್ರತಿಭೆಗೆ ಒಂದು ಉದಾಹರಣೆ ಎಂದರು.
ಡಾ.ರಾಜ್ ಅವರು ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದು ಕರೆದರು.
ನಟನೆ ಅಷ್ಟೇ ಅಲ್ಲದೇ ಸಂಗೀತ ಗಾಯಕರಾಗಿ ಉದಯಿಸಿದರು, ಆ ಮೂಲಕ ಸರಸ್ವತಿ ಪುತ್ರನ ಅವತಾರವಾಯಿತು ಎಂದರು.
ಅವರ ಕಲಾ ತಪಸ್ಸಿನ ಜೀವನ, ಪರಿಶ್ರಮವನ್ನು ನಮ್ಮ ಜೀವನದ ಸ್ಪೂರ್ತಿಯಾಗಿಸಿಕೊಳ್ಳಬೇಕು ಎಂದರು.
ಅವರ ಜೀವನ ಸಹ ಪರಿಶುದ್ದತೆಯ ಸಂಕೇತವಾಗಿತ್ತು, ಮಧ್ಯಪಾನ, ಧೂಮಪಾನದ ಹತ್ತಿರ ಅವರು ಸುಳಿಯಲಿಲ್ಲ, ಉತ್ತಮ ಯೋಗ ಪಟುವಾಗಿದ್ದ ಡಾ.ರಾಜ್ ಅವರು ಕಠಿಣ ಆಸನಗಳನ್ನು ನಿತ್ಯ ಮಾಡುತ್ತಿದ್ದರು ಎಂದರು.
ಉಪನ್ಯಾಸ ಮಂಡಿಸಿದ ಪತ್ರಕರ್ತರಾದ ಪರಶುರಾಮ ಭಾಸಗಿ ಮಾತನಾಡಿ,
ಡಾ.ರಾಜಕುಮಾರ್ ಅವರದ್ದು
ಹೋಲಿಕೆಗೆ ನಿಲುಕದ ವ್ಯಕ್ತಿ, ಅವರಿಗೆ ಅವರೇ ಸಾಟಿ, ನಾವು ಒಳ್ಳೆಯವರನ್ನು ರಾಜಕುಮಾರ್ ಅವರಿಗೆ ಹೋಲಿಸುತ್ತೇವೆ, ಓರ್ವ ತಾಯಿ ತನ್ನ ಮಗನನ್ನು ನನ್ನ ಮಗ ರಾಜಕುಮಾರ್ ಇದ್ದಂತೆ ಇದ್ದಾನೆ ಎಂದು ಅಭಿಮಾನದಿಂದ ಹೇಳುವುದುಂಟು, ಅಭಿಮಾನಕ್ಕೆ ಹೋಲಿಕೆ ಡಾ.ರಾಜ್ ಆಗಿದ್ದಾರೆ ಹೊರತು ಅವರಿಗೆ ಹೋಲಿಕೆ ಪದಗಳಿಲ್ಲ, ಅವರದ್ದು ವರ್ಣನಾತೀತ ವ್ಯಕ್ತಿತ್ವ, ಅವರ ಬಣ್ಣಿಸಲು ಉಪಮೇಯಗಳೇ ಇಲ್ಲ ಎಂದರು. ಕನ್ನಡ ನಾಡಿನ ಚಿತ್ರರಂಗಕ್ಕೆ ಧೃವತಾರೆಯಾಗಿ ಬಂದಿದ್ದು ನಮ್ಮ ಸುದೈವ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಮಾತನಾಡಿ,
ಡಾ.ರಾಜಕುಮಾರ್ ನಾಟಕ ಕಂಪನಿ ಮೂಲಕವೇ ಚಿತ್ರ ರಂಗ ಬೆಳಗಿದ ಮಹಾನ್ ಚೇತನ, ರಂಗಭೂಮಿಯೇ ಅವರ ತಾಯಿಬೇರು ಎಂದರು.
ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಸಮಾವೇಶದಲ್ಲಿ ಡಾ.ರಾಜ್
ಅವರು ಭಾಗವಹಿಸಿ ಹುಟ್ಟಿದರೆ ಕನ್ನಡ ನಾಡಿನಲಿ ಹುಟ್ಟಬೇಕು ಎಂದು ಹಾಡಿದ, ಆ ಹಾಡಿಗೆ ಹಾರ್ಮೋನಿಯಂ ನುಡಿಸಿದ
ಭಾಗ್ಯ ನನ್ನದು, ನಂತರ ನಮ್ಮ ತಂದೆಯವರು ಮಾಸ್ಟರ್, ನೀವು ಮಾಸ್ಟರ್ ಎಂದು ಸರಳತೆಯಿಂದ ನನ್ನನ್ನು ಅಭಿನಂದಿಸಿದರು, ಇದು ಅವರ ಸರಳತೆಯ ಸಾಕ್ಷಿ ಎಂದರು.
ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಭೀಮರಾವ ಜಿಗಜಿಣಗಿ, ಸೋಮು ಕಲ್ಲೂರ, ಫಯಾಜ್ ಕಲಾದಗಿ, ಸುರೇಶ ಬಿಜಾಪೂರ,ಶರಣು ಸಬರದ ಮೊದಲಾದವರು ಉಪಸ್ಥಿತರಿದ್ದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿದರು. ವಿರೇಶ ವಾಲಿ ಪ್ರಾರ್ಥಿಸಿದರು. ವಿರೇಶ ವಾಲಿ ಹಾಗೂ ಮಂಜುಳಾ ಹಿಪ್ಪರಗಿ ನಾಡಗೀತೆ ಪ್ರಸ್ತುತ ಪಡಿಸಿದರು. ಸಂಗೀತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 70 ಜನ ಕಲಾವಿದರು ಡಾ.ರಾಜ್ ಹಾಡು ಹಾಗೂ ಸಂಭಾಷಣೆಗಳನ್ನು ಹೇಳುವ ಮೂಲಕ ಜನಮನಸೂರೆಗೊಂಡರು.



