ಬೆಂಗಳೂರು ಮಾಜಿ ಸಚಿವ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಅವರ ಪರಮಾಪ್ತ ಅಶ್ವತ್ಥ್ ಎಂಬ ವ್ಯಕ್ತಿ ನಿರ್ಮಿಸಿರುವ ಅಕ್ರಮ ಬಡಾವಣೆಗೆ ಕಾನೂನು ಬಾಹಿರವಾಗಿ ಎ ಖಾತಾಗಳನ್ನು ಮಾಡಿ ಕೊಡುವ ಮೂಲಕ ಪಾಲಿಕೆಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಹೇರೋಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮಂಜುಳಾ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ಗ್ರಾಮದಲ್ಲಿರುವ 4.20 ಎಕರೆ ವಿಸ್ತೀರ್ಣದ ಸ್ವತ್ತಿನಲ್ಲಿ ಅಶ್ವಥ್ ಎಂಬಾತ ಬಿಡಿಎ ನಕ್ಷೆ ಮಂಜೂರಾತಿಯನ್ನೇ ಪಡೆಯದೆ ಅನಧಿಕೃತ ಬಡಾವಣೆ ನಿರ್ಮಾಣ ಮಾಡಿದ್ದಾರೆ.
ಬಡಾವಣೆ ನಿರ್ಮಿಸಿರುವ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ಕುಟುಂಬಸ್ಥರ ನಡುವೆ ವ್ಯಾಜ್ಯ ನಡೆಯುತ್ತಿದ್ದರೂ ಸಹ ಕಾನೂನು ಬಾಹಿರವಾಗಿ ಖಾತಾಗಳನ್ನು ಮಾಡಲಾಗಿದೆ ಎಂದು ಅವರು ತಮ ದೂರಿನಲ್ಲಿ ತಿಳಿಸಿದ್ದಾರೆ.
ಅವಿವಾಹಿತ ಗಂಗಯ್ಯ ಎಂಬುವವರ ಮಾಲೀಕತ್ವಕ್ಕೆ ಸೇರಿದ್ದ ಜಾಗದಲ್ಲಿ ಗಿರಿಜಾ ಬಾಯಿ ಎನ್ನುವವರನ್ನು ಗಂಗಯ್ಯನವರ ಪತ್ನಿ ಮತ್ತು ತೇಜಸ್ವಿನಿ ಗಂಗಯ್ಯನವರ ಮಗಳು ಎಂಬ ದಾಖಲೆ ಸೃಷ್ಟಿಸಲಾಗಿದೆ ಎಂದು ಆತನ ಸಹೋದರನ ಮಗಳು ಮೋಹನ ಕುಮಾರಿ ಎಂಬುವವರು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಸ್ವತ್ತಿನಲ್ಲಿ ಅಕ್ರಮವಾಗಿ ಬಡಾವಣೆಯನ್ನು ನಿರ್ಮಿಸಲಾಗಿದೆ. ಬಿಡಿಎಯಿಂದ ನಕ್ಷೆ ಮಂಜೂರಾತಿ ಪಡೆಯದೆ ಅಕ್ರಮವಾಗಿ ಬಡಾವಣೆ ನಿರ್ಮಿಸಿದ್ದರೂ ಸಹ ಎಆರ್‌ಒ ಮಂಜುಳಾ ಅವರು ಎ ಖಾತಾ (ಇ ಖಾತಾ) ಮಾಡಿಕೊಟ್ಟಿದ್ದಾರೆ.
ಕಾನೂನು ಬಾಹಿರವಾಗಿ ವಿಂಗಡಿಸಿರುವ 50 ನಿವೇಶನಗಳಿಗೆ ಖಾತಾಗಳನ್ನು ಈ ಹಿಂದೆಯೇ ಮಾಡಿರುವ ಹಾಗೆ ದಾಖಲೆಗಳನ್ನು ತಿದ್ದಲಾಗಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದು, ಅಧಿಕೃತ ಬಡಾವಣೆಯಾಗಿದ್ದಲ್ಲಿ ಈ 50 ನಿವೇಶನಗಳಿಗೆ ಎ / ಇ ಖಾತಾ ಮಾಡಿಕೊಟ್ಟಿದ್ದರೆ ಕನಿಷ್ಠ ಆರೇಳು ಕೋಟಿ ರೂಪಾಯಿ ಸುಧಾರಣಾ ಶುಲ್ಕ ಪಾಲಿಕೆಗೆ ಸಂದಾಯವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಆದರೆ ಮಂಜುಳಾ ಅವರು ಲಂಚ ಪಡೆದು ಈ ರೀತಿ ಕರ್ತವ್ಯಲೋಪ ಮಾಡಿದ್ದಾರೆ. ಅವರ ವಿರುದ್ಧ ಹಲವಾರು ದೂರುಗಳು ದಾಖಲಾಗಿದ್ದರೂ ಸಹ, ಇರುವರೆವಿಗೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುತ್ತದೆ ಎಂದಿದ್ದಾರೆ.
ಹೀಗಾಗಿ ಮಂಜುಳಾ ಅವರ ವಿರುದ್ಧ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳು ದಾಖಲು ಮಾಡಲಾಗಿದೆ ಎಂದು ಅವರು ಹೇಳಿದರು.
ಮಾತ್ರವಲ್ಲ, ಹಲವಾರು ಆರೋಪಗಳಿಗೆ ಗುರಿಯಾಗಿರುವ ಮಂಜುಳಾ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡು ಇಲಾಖಾ ವಿಚಾರಣೆಗೆ ಆದೇಶಿಸಬೇಕು ಎಂದು ಅವರುಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರನ್ನು ಆಗ್ರಹಿಸಿದ್ದಾರೆ.



