ಬೆಂಗಳೂರು: ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಿರುವ ಬಳ್ಳಾರಿ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಒಟ್ಟು 13,96,742 ಚ. ಅಡಿಗಳಷ್ಟು ಜಾಗಕ್ಕೆ 1,396 (ಸಾವಿರದ ಮುನ್ನೂರಾ ತೊಂಬತ್ತಾರು) ರೂಪಾಯಿಗಳಷ್ಟು ಮೌಲ್ಯದ TDR ಅನ್ನು ನೀಡಲಾಗುತ್ತಿದೆ ಎಂಬ ತಪ್ಪು ಮಾಹಿತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾಧ್ಯಮಗಳಿಗೆ ನೀಡಿರುತ್ತದೆ.
ಆದರೆ, ವಾಸ್ತವವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 13,96,742 ಚ. ಅಡಿಗಳಷ್ಟು ವಿಸ್ತೀರ್ಣದ ಸ್ವತ್ತಿಗೆ ನೀಡುತ್ತಿರುವ TDR ನ ಒಟ್ಟು ಮೌಲ್ಯ ಕನಿಷ್ಠ 18,000 ಕೋಟಿ ರೂಪಾಯಿಗಳಿಗೂ ಅಧಿಕವಾಗಿರುತ್ತದೆ.
ವಾಸ್ತವವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆ ತನ್ನ ಅಭಿವೃದ್ಧಿ ಕಾರ್ಯಗಳಿಗಾಗಿ ಸಾರ್ವಜನಿಕರಿಂದ ವಶಪಡಿಸಿಕೊಳ್ಳುವ ಖಾಸಗಿ ಸ್ವತ್ತಿನ ವಿಸ್ತೀರ್ಣವನ್ನು ಲೆಕ್ಕ ಹಾಕಿ ಅದಕ್ಕೆ ಅನುಗುಣವಾಗಿ DRC ಗಳನ್ನು ನೀಡಬೇಕಿರುತ್ತದೆ. ಆದರೆ, ಈ ಪ್ರಕರಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ವಶಪಡಿಸಿಕೊಳ್ಳಲಾಗಿರುವ ಸ್ವತ್ತಿನ ವಿಸ್ತೀರ್ಣಕ್ಕೆ ಬದಲಾಗಿ ಆ ಸ್ವತ್ತಿನಲ್ಲಿ ನಿರ್ಮಿಸಿದ್ದ ಹಳೆಯ ಕಟ್ಟಡಗಳ ಒಟ್ಟು ನಿರ್ಮಿತ ಪ್ರದೇಶವನ್ನೂ ಸೇರಿಸಿ ವಿಸ್ತೀರ್ಣದ ಲೆಕ್ಕ ಹಾಕಿರುವುದು ಕಾನೂನು ಬಾಹಿರ ಕ್ರಮವಾಗಿರುತ್ತದೆ.
ಬಳ್ಳಾರಿ ರಸ್ತೆ ಅಗಲೀಕರಣ ಕಾರ್ಯಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವಾಸ್ತವವಾಗಿ ಭೂಸ್ವಾಧೀನ ಪಡಿಸಿಕೊಂಡಿರುವುದು ಸುಮಾರು 2,00,000 (ಎರಡು ಲಕ್ಷ) ಚ. ಅಡಿಗಳಷ್ಟು ಜಾಗವನ್ನು ಮಾತ್ರ. ಆದರೆ, ಪಾಲಿಕೆಯು TDR ನೀಡಲು ಹೊರಟಿರುವುದು 13,96,742 ಚ. ಅಡಿಗಳಷ್ಟು ಜಾಗಕ್ಕೆ ಎಂಬುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಭೂಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ನಿರ್ಮಿಸಲಾಗಿದ್ದ ಅತ್ಯಂತ ಹಳೆಯ ಕಟ್ಟಡಗಳ ಒಟ್ಟು ನಿರ್ಮಿತ ಪ್ರದೇಶಗಳನ್ನು ಸೇರಿಸಿ TDR ನೀಡಲು ಹೊರಟಿರುವುದು ಕಾನೂನುಬಾಹಿರ ಕಾರ್ಯವಾಗಿದೆ.
ರಾಜ್ಯ ಸರ್ಕಾರದಲ್ಲಿರುವ ಅತ್ಯಂತ ಪ್ರಭಾವೀ ರಾಜಕಾರಣಿಗಳು ಹಾಗೂ ಪ್ರಭಾವೀ TDR ಮಾಫಿಯಾದ ಒತ್ತಡಗಳಿಗೆ ಮಣಿದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇಂತಹ ಜನ ವಿರೋಧಿ ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈ ಜನ ವಿರೋಧಿ ನಿಲುವಿನಿಂದಾಗಿ ರಾಜ್ಯ ಸರ್ಕಾರದಲ್ಲಿರುವ ಭ್ರಷ್ಟ ರಾಜಕಾರಣಿಗಳು ಮತ್ತು TDR ಮಾಫಿಯಾದ ಪ್ರಭಾವಿಗಳು TDR ಮಾರಾಟದ ಮೂಲಕ ಕುಳಿತ ಜಾಗದಲ್ಲೇ ಸುಮಾರು 18,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಸರಿಯಾದ ಕ್ರಮವಾಗಿರುವುದಿಲ್ಲ.
TDR ಗೆ ಸಂಬಂಧಿಸಿದ ನಿಯಮಗಳಿಗೆ ಇತ್ತೀಚೆಗೆ ಮಾರ್ಪಾಡು ತಂದಿರುವ ಸರ್ಕಾರದ ಹೊಸ ನೀತಿ ನಿಯಮಗಳ ಅನ್ವಯ – ಸರ್ಕಾರಿ ಯೋಜನೆಗಳಿಗೆಂದು ವಶಪಡಿಸಿಕೊಳ್ಳಲಾದ ಸ್ವತ್ತಿನ ಮಾರ್ಗಸೂಚಿ ದರ (ಕಂದಾಯ ಇಲಾಖೆಯಿಂದ ನಿಗದಿಪಡಿಸಿರುವ ದರ) ದಂತೆ ಬಿಲ್ಡರ್ ಗಳು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಗಡಿಯೊಳಗಿನ ಪ್ರದೇಶದ ಯಾವುದೇ ಭಾಗದಲ್ಲಾದರೂ ಬಳಸಿಕೊಳ್ಳಬಹುದಾಗಿರುತ್ತದೆ.
ಉದಾಹರಣೆಗೆ ಪ್ರಸ್ತುತ ಬಳ್ಳಾರಿ ರಸ್ತೆಯ ಅಗಲೀಕರಣ ಕಾರ್ಯಕ್ಕೆಂದು ವಶಪಡಿಸಿಕೊಳ್ಳಲಾಗಿರುವ ಅರಮನೆ ಮೈದಾನದ ಮಾರ್ಗಸೂಚಿ ದರ ಪ್ರತಿ ಚದರ ಅಡಿಗೆ ₹. 29,600 ರೂಪಾಯಿಗಳಷ್ಟಿರುತ್ತದೆ. ಇಲ್ಲಿ ಪಡೆದಂತಹ TDR / DRC ಅನ್ನು ₹. 15,000 ರೂಪಾಯಿಗಳಷ್ಟು ಮಾರ್ಗಸೂಚಿ ದರ ಇರುವ ಪ್ರದೇಶಗಳಲ್ಲಿ ಬಳಸಿಕೊಂಡಿದ್ದೇ ಆದಲ್ಲಿ ಎರಡು ಪಟ್ಟು ಹೆಚ್ಚು ವಿಸ್ತೀರ್ಣದ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿರುತ್ತದೆ. ₹. 10,000 ರೂಪಾಯಿಗಳಷ್ಟು ಮಾರ್ಗಸೂಚಿ ದರ ಇರುವ ಪ್ರದೇಶಗಳಲ್ಲಿ ನಿರ್ಮಿಸುವ ಬೃಹತ್ ಕಟ್ಟಡಗಳಲ್ಲಿ ಮೂರು ಪಟ್ಟು ಹೆಚ್ಚು ವಿಸ್ತೀರ್ಣದ ಕಟ್ಟಡವನ್ನು ನಿರ್ಮಿಸಿಕೊಳ್ಳಲು ಅವಕಾಶವಿರುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು, ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದೆಂದು ಹಾಗೂ ಈಗಾಗಲೇ ಈ ಪ್ರಕರಣವು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದ ವಾಸ್ತವ ಸ್ಥಿತಿಗತಿಗಳನ್ನು ನುರಿತ ವಕೀಲರ ಮೂಲಕ ನ್ಯಾಯಾಲಯದ ಗಮನಕ್ಕೆ ತರಬೇಕೆಂದು ಮತ್ತು ಆ ಮೂಲಕ ಪ್ರಭಾವೀ ರಾಜಕಾರಣಿಗಳು ಮತ್ತು ಪ್ರಭಾವೀ TDR ಮಾಫಿಯಾದವರ ಸಂಚನ್ನು ವಿಫಲಗೊಳಿಸುವ ಸಂಬಂಧ ಕಾನೂನು ರೀತ್ಯಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರನ್ನು ಮತ್ತು ಮಾನ್ಯ ಆಡಳಿತಾಧಿಕಾರಿಗಳನ್ನು ಆಗ್ರಹಿಸಲಾಗಿದೆ.