ಕೊಪ್ಪಳ: ಕನ್ನಡದ ಎರಡಕ್ಷರ ಬರೆಯಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪರದಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂಗನವಾಡಿ ಕೇಂದ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿದ್ದರು. ತರಗತಿಯ ಬೋರ್ಡ್ ನಲ್ಲಿ ಕಾರಟಗಿ ಅಂಗನವಾಡಿ ಕೇಂದ್ರ, JP ನಗರ, ಉದ್ಘಾಟನಾ ಸಮಾರಂಭ ಎಂದು ಬರೆಯಲಾಗಿತ್ತು. ಸಚಿವರು ಈ ವಾಕ್ಯದ ಕೆಳಗೆ ಶುಭವಾಗಲಿ ಎಂದು ಬರೆಯಲು ಮುಂದಾಗಿದ್ದಾರೆ. ಆದರೆ “ಶುಬವಾಗಲಿ” ಎಂದು ತಪ್ಪಾಗಿ ಬರೆದಿದ್ದಾರೆ. ಜೊತೆಗಿರುವವರು ಸಚಿವರಿಗೆ ಹಾಗಲ್ಲ ಹೀಗೆ ಎಂದು ಹೇಳಿಕೊಟ್ಟಿದ್ದಾರೆ, ಬಳಿಕ ಅವರು ಶುಭವಾಗಲಿ ಎಂದು ಕಷ್ಟಪಟ್ಟು ಬರೆದಿದ್ದಾರೆ.
ಶ ಅಕ್ಷರಕ್ಕೆ ಕೊಂಬು, ಬ ಅಕ್ಷರಕ್ಕೆ ತಲೆಕಟ್ಟು, ಬ ಅಕ್ಷರದ ಕೆಳಗೆ ಬಾಲ ಬರೆಯುವಂತೆ ಸಚಿವರಿಗೆ ಜೊತೆಗಿದ್ದವರು ಹೇಳಿಕೊಟ್ಟು ಕನ್ನಡ ಅಕ್ಷರ ಬರೆಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎರಡಕ್ಷರ ಕನ್ನಡ ಬರೆಯಲು ಗೊತ್ತಿಲ್ಲದವರು ಕನ್ನಡ ಮತ್ತು ಸಂಸ್ಕೃತಿ ಸಚಿವರು ಎಂದು ವ್ಯಾಪಕ ಟ್ರೋಲ್ ಆಗುತ್ತಿದೆ.