ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ

WhatsApp Group Join Now

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ರಂಗ ಮಂದಿರದಲ್ಲಿ ಶನಿವಾರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ನಾವು ಯಾರೂ ಇರಲಿಲ್ಲ. ಆಗ ಆದ ಶರಣರ ಕ್ರಾಂತಿಕಾರಿ ಹೋರಾಟಗಳನ್ನು ತಿಳಿದುಕೊಳ್ಳಲು ಇಂತಹ ಶರಣರ ಜಯಂತಿಗಳನ್ನು ಆಚರಿಸಲಾಗುತ್ತದೆ. ಶರಣರು ಹೋರಾಟ ಮಾಡದೆ ಹೋಗಿದ್ದರೆ ಸಾಮಾಜಿಕವಾಗಿ ನಾವು ಇನ್ನೂ ಹಿಂದೆ ಉಳಿದಿರುತ್ತಿದ್ದೇವು.

ಶರಣರು ಮಾಡಿದ ಕಾರ್ಯಗಳನ್ನು ನಾವೆಲ್ಲರು ಮುಂದುವರಿಸಬೇಕು. ಅವರು ಮಾಡಿದ ಕ್ರಾಂತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜಯಂತಿ ಮಾಡಿದ್ದು ಸಾರ್ಥಕವಾಗುತ್ತದೆ.

ಕೋಳಿ-ಬೆಸ್ತ ಸಮುದಾಯವು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಂಡು ಶಿಕ್ಷ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕು. ನಾನು ಮತ್ತು ನಮ್ಮ ಸರಕಾರ ಯಾವಾಗಲು ಸಮುದಾಯದ ಜೊತೆ ಇರುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಳಿ-ಬೆಸ್ತ ಸಮಾಜದ ಜಿಲ್ಲಾಧ್ಯಕ್ಷರಾದ ದಿಲೀಪಕುಮಾರ ಕುರುಂದವಾಡೆ ಅವರು, ಕೋಳಿ-ಬೆಸ್ತ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಆರೋಗ್ಯ ಇಲಾಖೆಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎಸ್.ಕೆ. ಹೊಳೆಪ್ಪನವರ ಅವರು, 12 ನೇ ಶತಮಾನದಲ್ಲಿ ಮೌಢ್ಯಾಚಾರ, ಲಿಂಗ ತಾರತಮ್ಯ, ಜಾತಿ ತಾರತಮ್ಯ, ಕಂದಾಚಾರ, ಪುರೋಹಿತಶಾಹಿಗಳ ದೌರ್ಜನ್ಯ ಹೀಗೆ ಮುಂತಾದ ದೌರ್ಜನ್ಯಗಳು ನಡೆಯುತ್ತಿದ್ದವು. ಅಂತಹ ದೌರ್ಜನ್ಯಗಳನ್ನು ನಿಲ್ಲಿಸಲು ಶುರುವಾದ ಶರಣ ಕ್ರಾಂತಿಯಲ್ಲಿ ಶರಣ ಅಂಬಿಗರ ಚೌಡಯ್ಯನವರು ಒಬ್ಬ ಕ್ರಾಂತಿಕಾರಿಗಳು. ಇವರು ಬಸವಣ್ಣನವರ ದೊಡ್ಡ ಅಭಿಮಾನಿಯಾಗಿದ್ದರು ಎಂದು ಹೇಳಿದರು.

ಅಂಬಿಗರ ಚೌಯ್ಯನವರು ಮೂಢನಂಬಿಕೆ ಕಂದಾಚಾರಗಳನ್ನು ದಿಕ್ಕರಿಸಿದ್ದರು, ಸಮಾನತೆಯನ್ನು ತಮ್ಮ ವಚನಗಳ ಮುಖಾಂತರ ಸಾರುತಿದ್ದರು; ಮತ್ತು ತಾವು ಹೇಳಿದ ವಚನಗಳಂತೆ ಬದುಕುತಿದ್ದರು. ಅವರು ತುಂಬಾ ನೇರ ನಿಷ್ಠುರರಾಗಿದ್ದರು, ಮತಿಹೀನರನ್ನು ನೇರವಾಗಿ ವಿರೋಧಿಸುತ್ತಿದ್ದರು.

ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಬಸವಣ್ಣನವರು ವಚನಗಳಿಗೆ ತಾಯಿಯಾಗಿದ್ದರೆ ಅಂಬಿಗರ ಚೌಡಯ್ಯನವರ ವಚನಗಳು ತಂದೆಯಾಗಿದ್ದವು ಎಂದರು.

ಶರಣ ಅಂಬಿಗರ ಚೌಡಯ್ಯನವರ ಬಗ್ಗೆ ಕೆಲವರು ಕಟ್ಟು ಕತೆಗಳನ್ನು ಹೇಳುತ್ತಾ ಹೊರಟಿದ್ದಾರೆ. ಸಂಶೋಧಕರು ಅಂತಹ ಕಟ್ಟುಕತೆಗಳನ್ನು ನಂಬುವುದಿಲ್ಲಾ; ವಚನ ಸಾಹಿತ್ಯ ವಿಶಾಲವಾದದ್ದು ಅವುಗಳ ಅಧ್ಯಯನ ಮಾಡಬೇಕು ಎಂದು ಎಸ್.ಕೆ. ಹೊಳೆಪ್ಪನವರ ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಿದ್ದು ಸುಣಗಾರ, ಗಂಗಾಧರ ತಳವಾರ, ಅಪ್ಪಾಸಾಹೇಬ್ ಪೂಜಾರಿ, ಮಧುಶ್ರೀ ಪೂಜಾರಿ ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author