ಬೆಂಗಳೂರು : ಕಟ್ಟಡ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣ ಪತ್ರವಿಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ ಜನರು ಈ ಅನುಮತಿಗಳು ಇಲ್ಲದೆ ಮನೆ ಕಟ್ಟಬೇಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶಕ್ಕೆ ಈ ತೀರ್ಪು ಆನ್ವಯವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಇದುವರೆಗೂ 2.50 ಲಕ್ಷ ಜನ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಅನುಮತಿ ಪಡೆಯದೇ ಮನೆ ಕಟ್ಟಿಕೊಂಡು, ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ ಎಂದು ಹೇಳಿದರು.
ಈ ವಿಚಾರವಾಗಿ ಕಾನೂನು ಸಲಹೆಗಾರರ ಜತೆ ಚರ್ಚಿಸಿ, ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂದು ಅಭಿಪ್ರಾಯ ಕೇಳಿದ್ದೇನೆ. ಕೆಲವು ಸಾರ್ವಜನಿಕರು ಕೆಇಬಿಗೆ ಠೇವಣಿ ಪಾವತಿ ಮಾಡಿದ್ದು, ಈ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆಗೂ ಚರ್ಚೆ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಇದನ್ನು ಯಾವ ರೀತಿ ಬಗೆಹರಿಸಲಿದ್ದಾರೆ ಎಂದು ಮಾಹಿತಿ ಕಲೆಹಾಕುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಯಾರೂ ಮನೆ ಕಟ್ಟಬೇಡಿ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತೆ ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಈ ವಿಚಾರದಲ್ಲಿ ಅಕ್ರಮವಾಗಿ ಮನೆ ಕಟ್ಟಿದರೆ ಸಕ್ರಮ ಮಾಡುವುದು ಕಷ್ಟ. ನೀರು ಹಾಗೂ ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂದು ಅವರು ತಿಳಿಸಿದರು.
ಕಾನೂನು ಚೌಕಟ್ಟಿನಲ್ಲಿ ಜನರಿಗೆ ಸಹಾಯ: ನ್ಯಾಯಾಲಯದಆದೇಶ ಬಂದ ನಂತರ ಕೆಇಆಕ್ಸಿಯಿಂದ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಲಾಗಿದೆ. ಈ ಸಮಸ್ಯೆ ಬಗೆಹರಿಸಲು ನಾವು ಮುಂದಾಗಿದ್ದೇವೆ. ಕಾನೂನು ಚೌಕಟ್ಟಿನಲ್ಲೇ ನಾವು ಜನರಿಗೆ ಸಹಾಯ ಮಾಡಬೇಕು ಎಂದು ಶಿವಕುಮಾರ್ ತಿಳಿಸಿದರು.
ಅಕ್ರಮ ಸಕ್ರಮ ಕಾಯ್ದೆ ತರಬಹುದಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾಯ್ದೆಗೆ ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ತಡೆಹಿಡಿಯಲಾಗಿದೆ. ನಮ್ಮ ಸರಕಾರ ಎ ಖಾತಾ, ಬಿ ಖಾತಾ ಎಲ್ಲ ಸಮಸ್ಯೆ ಬಗೆಹರಿಸಲು ಚರ್ಚೆ ಮಾಡುತ್ತಿದೆ. 110 ಹಳ್ಳಿಗಳಿಗೆ ನೀರಿನ ಸಂಪರ್ಕ ನೀಡಲು ಮುಂದಾಗಿದ್ದೆವು. ಈ ತೀರ್ಪಿನ ನಂತರ ಬೆಂಗಳೂರು ಜಲ ಮಂಡಳಿಗೆ ತೊಂದರೆಯಾಗಿದೆ. ಕಳೆದ ವರ್ಷ ಈ ತಿಂಗಳಲ್ಲಿ 39 ಸಾವಿರ ನೀರಿನ ಸಂಪರ್ಕ ನೀಡಿದ್ದೆವು. ಈ ವರ್ಷ ಕೇವಲ 300 ಸಂಪರ್ಕ ನೀಡಿದ್ದೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ನಮಗೆ ಮುಖ ಕೊಟ್ಟು ಮಾತನಾಡುವುದಿಲ್ಲ ಎಂದು ಶಾಸಕ ರಾಜು ಕಾಗೆ ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನೀವು ದಿನಬೆಳಗಾದರೆ ನಮ್ಮ ಮನೆಗೆ ಬಂದಾಗ ನನ್ನ ಮುಖ ತೋರಿಸುತ್ತೀರಲ್ಲವೇ? ನಮ್ಮ ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿ. ಅಧಿವೇಶನ ಸಮೀಪಿಸಿದಾಗ ಶಾಸಕಾಂಗ ಸಭೆ ಕರೆಯೋಣ ಎಂದು ಹೇಳಿದರು.