ಅರಣ್ಯವಾಸಿಗಳ ಪುನರ್ವಸತಿಗೆ ಸೂಕ್ತ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

WhatsApp Group Join Now

ಬೆಳಗಾವಿ ಭೀಮಗಡ ನೇಚರ್ ಕ್ಯಾಂಪ್ ಆವರಣದಲ್ಲಿ ಭಾನುವಾರ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಅಭಯಾರಣ್ಯದಿಂದ ಹೊರಬರಲು ಇಚ್ಛಿಸುವ ಕುಟುಂಬಗಳಿಗೆ‌ ಸರಕಾರದ‌ ಮಾರ್ಗಸೂಚಿ ಪ್ರಕಾರ ಪುನರ್ವಸತಿಯನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಅಭಯಾರಣ್ಯದಲ್ಲಿ ವಾಸಿಸುವ ಜನರಿಗೆ ರಸ್ತೆ, ನೀರು, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಳೇವಾಡಿ‌ ಗ್ರಾಮದ ಜನರು ಸ್ವ ಇಚ್ಛೆಯಿಂದ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದರೆ ತಕ್ಷಣವೇ ಎಲ್ಲ ರೀತಿಯ ನೆರವು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ಎಲ್ಲ‌ ಕುಟುಂಬಗಳಿಗೆ ಪರ್ಯಾಯ ಜಾಗೆ ಮತ್ತು ಮನೆಯನ್ನು ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಅವರು, ಸರಕಾರದ‌ ಮಾರ್ಗಸೂಚಿ ಪ್ರಕಾರ ವ್ಯವಸ್ಥೆ‌ ಮಾಡಲಾಗುವುದು ಎಂದರು.
ಗ್ರಾಮಸ್ಥರ‌ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಬೇಕು ಹಾಗೂ ಪುನರ್ವಸತಿಗಾಗಿ ಸರಕಾರದಿಂದ ಬಿಡುಗಡೆಯಾಗುವ ಅನುದಾನದ ಬಳಕೆಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳು ಮತ್ತು ಪುನರ್ವಸತಿ ಸಮಿತಿಯ ಸದಸ್ಯ‌ ಕಾರ್ಯದರ್ಶಿಗಳ ಹೆಸರಿನಲ್ಲಿ ಜಂಟಿ‌ ಖಾತೆ ತೆರಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿಸಿಎಫ್ ಮರಿಯಾ ಕ್ರಿಸ್ತುರಾಜಾ, ಎಸಿಎಫ್ ಸುನೀತಾ ನಿಂಬರಗಿ, ಖಾನಾಪುರ ತಹಶೀಲ್ದಾರ ಪ್ರಕಾಶ್ ಗಾಯಕವಾಡ ಸೇರಿದಂತೆ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ತಳೇವಾಡಿ ಗ್ರಾಮದ ಜನರು ಸಭೆಯಲ್ಲಿ ಉಪಸ್ಥಿತರಿದ್ದರು.

About The Author