
ರಾಮದುರ್ಗ: ಸಾರ್ವತ್ರಿಕ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರವು ಪೌರತ್ವ
ಕಾಯಿದೆ ಕುರಿತು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿ ಕೋಮು ಧ್ರುವೀಕರಣವನ್ನು
ಚುರಕುಗೊಳಿಸುವ ಮತ್ತು ಚುನಾವಣೆಯಲ್ಲಿ ಲಾಭಗಳಿಸುವ ಸ್ಪಷ್ಟ ಗುರಿಯನ್ನು ಹೊಂದಿದೆ.
ಪೌರತ್ವ ಕಾಯಿದೆ ವಿರೋಧಿಸಿದ್ದ ಸರಕಾರಗಳನ್ನು ಹೊರಗಿಡುವ ಉದ್ದೇಶವು ಈ ಕಾಯಿದೆ ಹಿಂದೆ
ಇದೆ. ಇಂತಹ ಕೋಮು ಧ್ರುವೀಕರಣ ಪೌರತ್ವ ಕಾಯಿದೆ ನಮಗೆ ಬೇಡ ಎಂದು ರಾಮದುರ್ಗದ ವಿವಿಧ ಸಂಘಟನೆಗಳ ಮುಖಂಡರು ತಹಶೀಲ್ದಾರ ಮೂಲಕ ರಾಷ್ಟ್ರಪತಿಯವರಿಗೆ ಮನವಿ
ಸಲ್ಲಿಸಿದರು.
2019 ಡಿಸೆಂಬರ್ 31ಕ್ಕೆ ಸಂಸತ್ತಿನಲ್ಲಿ ಅಂಗೀಕಾರವಾದ ಪೌರತ್ವ ಕಾಯಿದೆ ಜಾರಿ ಮಾಡಲು ನಾಲ್ಕು ವರ್ಷಗಳಿಂದ ಸುಮ್ಮನಿದ್ದು, ಈಗ ದಿಢೀರಾಗಿ ಲೋಕಸಭಾ ಚುನಾವಣೆಯನ್ನು
ಗುರಿಯಾಗಿಟ್ಟುಕೊಂಡು ಪೌರತ್ವ ಕಾಯಿದೆ ಜಾರಿ ಮಾಡಿರುವುದು ಅದರಲ್ಲಿ ಕೋಮು ಆಧಾರದಲ್ಲಿ
ಮಾಡಿರುವುದು ಸಂವಿಧಾನಕ್ಕೆ ವಿರೋಧವಾಗಿದೆ.
ಕಾನೂನು ದಾಖಲಾತಿಗಳಿಲ್ಲದೆ ನೆರೆ ದೇಶಗಳಿಂದ (ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ) ವಲಸೆ
ಬಂದಿರುವ ಆಕ್ರಮಣ ವಲಸೆಗಾರರಾದ ಹಿಂದೂ, ಸಿಖ್, ಬೌದ್ಧ, ಜೈನ ಮತ್ತು ಕ್ರಿಶ್ಚಿಯನ್
ಧರ್ಮಕ್ಕೆ ಸೇರಿದವರಾಗಿದ್ದರೆ ಪೌರತ್ವ ನೀಡಲಾಗುವುದು ಎಂದು ಮತ್ತೇ ಹಿಂದೂತ್ವವನ್ನು
ರಾರಾಜಿಸಿ ಚುನಾವಣೆ ಲಾಭಕ್ಕಾಗಿ ತಮಗೆ ಬೇಕಾದಂತೆ ನಿಯಮಗಳನ್ನು ರಚಿಸಿ ಮಾರ್ಚ 11,
2024 ರಂದು ಅಧಿಸೂಚನೆ ಹೊರಡಿಸಿದ್ದು ಖಂಡನೀಯ.
ಶ್ರೀಲಂಕಾದಿಂದ ತಮಿಳುನಾಡಿಗೆ ಬಂದಿರುವ ಕ್ರಿಶ್ಚಿಯನ್ನರು ಮ್ಯಾನ್ಮಾರದಿಂದ ಬಂದಿರುವ
ರೊಹಿಂಗ್ಯಾಗಳು ನೇಪಾಳ ಮತ್ತು ಭೂತಾನದಿಂದ ಬಂದವರಿಗೆ ಏಕೆ ಈ ಪೌರತ್ವ ಕಾಯಿದೆಯಡಿಯಲ್ಲಿ ಗುರುತಿಸಿಲ್ಲ. ಜಾತಿ ಆಧಾರದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿರುವ
ಕೇಂದ್ರ ಸರಕಾರದ ನೀತಿ ಹಾಗೂ ಏಕಾಏಕಿ ಜಾರಿ ಮಾಡಿದ ಜಾತಿ ಧ್ರುವೀಕರಣ ಮಾಡುವ
ಪೌರತ್ವ ಕಾಯಿದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ಜಿ.ಎಂ. ಜೈನಖಾನ್, ದಲಿತ ಸಂಘರ್ಷ ಸಮತಿ ಮುಖಂಡ ಬಿ.ಆರ್.ದೊಡಮನಿ, ಕಾಂಗ್ರೆಸ್ ಮುಖಂಡ ಮಹಮ್ಮದಶಫಿ ಬೆಣ್ಣಿ, ಇನ್ಸಾಪ್ ಕಮಿಟಿಯ ಮಹೆಬೂಬ ಯಾದವಾಡ, ಡಬ್ಬಾ ಅಂಗಡಿಕಾರರ ಸಂಘದ ಅಶೋಕ ಹಡಪದ,
ಅಶೋಕ ಸಾಳುಂಕೆ ಮತ್ತೀತರರು ಭಾಗವಹಿಸಿದ್ದರು.