ಬೆಳಗಾವಿ ಜಪ್ತಿಯಾದ ಮರಳನ್ನು ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಫಯಾಝ್ ಅಹ್ಮದ್ ಶೇಖ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಅಥಣಿ ಪಟ್ಟಣದ ನಿವಾಸಿ ಶೀತಲ್ ಗೋಪಾಲ ಸನದಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಇಲಾಖೆ ಈ ಕಾರ್ಯಾಚರಣೆ ನಡೆಸಿದೆ.
ಶೀತಲ್ ಅವರ ಪರಿಚಯದ ಗುತ್ತಿಗೆದಾರ ಬಿ.ಕೆ.ಮಗದುಮ್ಮ ಅವರಿಗೆ ಐನಾಪೂರ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಐಗಳಿ ಗ್ರಾಮದಲ್ಲಿ ಸೀಝ್ ಮಾಡಿರುವ ಮರಳನ್ನು ಪೂರೈಸಲು ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರ ಮೂಲಕ ಬೆಲೆ ನಿಗದಿ ಮಾಡಿ ಮರಳು ವಿಲೇವಾರಿ ಮಾಡಲು ಆದೇಶ ನೀಡುವ ಸಲುವಾಗಿ ಭೂ ವಿಜ್ಞಾನಿ ಫಯಾಝ್ ಅಹ್ಮದ್ ಶೇಖ್ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ನಡೆದ ಮಾತುಕತೆಯಲ್ಲಿ ರೂ. 15,000ಕ್ಕೆ ಲಂಚದ ಹಣ ಇಳಿಸಲಾಗಿತ್ತು.
ಈ ಸಂಬಂಧ ಶೀತಲ್ ಸನದಿ ನೀಡಿದ್ದ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಇಂದು ಭೂವಿಜ್ಞಾನಿ ಫಯಾಜ್ ಅಹ್ಮದ್ ಶೇಖ್ ಲಂಚ ಸ್ವೀಕರಿಸುವಾಗಲೇ ದಾಳಿ ನಡೆಸಿ ಬಂಧಿಸಿದ್ದು, ಅವರ ವಿರುದ್ಧ ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಬಿ.ಎಸ್. ಪಾಟೀಲ, ಡಿ.ಎಸ್.ಪಿ ಭರತರಡ್ಡಿ ಎಸ್.ಆರ್ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.