ಅರಣ್ಯ ಇಲಾಖೆಯ ಸಿಬ್ಬಂದಿಗೆ ನಿರ್ಮಿಸಿದ ನೂತನ ವಸತಿ ಗೃಹಗಳ ಕಟ್ಟಡವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಂಎಲ್‌ಬಿಸಿ ಅರಣ್ಯ ಇಲಾಖೆಯ ಆವರಣದಲ್ಲಿ ವಲಯ ಅರಣ್ಯ ಅಧಿಕಾರಿಗಳ ಕಛೇರಿ, ಪ್ರಾದೇಶಿಕ ಅರಣ್ಯ ವಲಯ ರಾಮದುರ್ಗ ಸಿಬ್ಬಂದಿಗಳಿಗೆೆ ನೂತನವಾಗಿ ನಿರ್ಮಿಸಿದ ವನ ಸಮೃದ್ಧಿ ನಿವಾಸ ಕಟ್ಟಡವನ್ನು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿ ಅವರು ಮಾತನಾಡಿದರು.
ವಿನಾಕಾರಣ ಅರಣ್ಯ ಪ್ರದೇಶಗಳು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಅವರು, ಪರಿಸರದ ಬಗೆ ವಿಶೇಷ ಕಾಳಜಿ ವಹಿಸಿ, ಈ ಹಿಂದೆ ಕಡಿಯುತ್ತಿರುವ ಮರಗಳನ್ನು ತಡೆದಿದ್ದೇನೆ. ಅರಣ್ಯ ನಾಶದಿಂದ ವಣ್ಯ ಜೀವಿಗಳು ನಾಡು ಸೇರಿ ಅನೇಕ ಅನಾಹುತಗಳು ಸಂಭವಿಸಿವೆ. ಪ್ರತಿಯೊಬ್ಬರು ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು. ಅಂದಾಗ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಬೆಳಗಾವಿ ಅರಣ್ಯ ಇಲಾಖೆಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ಇಲಾಖೆಯ ಸಿಬ್ಬಂದಿ ವಾಸಕ್ಕೆ ನಾಲ್ಕು ವಸತಿ ಗೃಹಗಳ ನಿರ್ಮಾಣ ಮಾಡಲಾಗಿದೆ. ಅವುಗಳ ಸದ್ಭಳಕೆಯಾಗಬೇಕು. ಮಾನವನ ದುರಾಶೆಯಿಂದ ಇಂದು ವಣ್ಯಜೀವಿ ಸಂಪತ್ತು ಹಾಗೂ ಅರಣ್ಯ ನಾಶವಾಗುತ್ತಿದೆ. ಅದರ ರಕ್ಷಣೆಗೆ ಇಲಾಖೆಯೊಂದಿಗೆ ಸರ್ವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ ಪ್ರಕಾಶ ಹೊಳೆಯಪ್ಪಗೋಳ ಮಾತನಾಡಿ, ಸಿಬ್ಬಂದಿ ವಾಸಕ್ಕೆ ವಸತಿ ಗೃಹ ನಿರ್ಮಾಣ ಕಾರ್ಯ ಶ್ಲಾಘನೀಯ. ಪರಿಸರ ರಕ್ಷಣೆಯಿಂದ ಮಾತ್ರ ಪ್ರತಿಯೊಬ್ಬರು ಆರೋಗ್ಯಯುತ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿ ಶಿವಾನಂದ ನಾಯಕವಾಡಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ವಲಯ ಅರಣ್ಯಾಧಿಕಾರಿ ಭ್ಯಾಗ್ಯಶ್ರೀ ಮಸಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಅರಣ್ಯಾಧಿಕಾರಿ ರಂಗನಾಥ ಹೊಸಮನಿ ನಿರೂಪಿಸಿದರು. ಸಹಾಯಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ದೊಡ್ಡಪತ್ತಾರ ವಂದಿಸಿದರು.

About The Author