ಸವದತ್ತಿ ಅಂತರಾಷ್ಟ್ರೀಯ ಯುವ ದಿನ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ.

ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕಃ 12-08-2026 ರಂದು ಶ್ರೀ. ಜಿ.ಜಿ.ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ “ಅಂತರಾಷ್ಟ್ರೀಯ ಯುವ ದಿನ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು.

ಸಹಾಯಕ ಸರ್ಕಾರಿ ಅಭಿಯೋಜಕರಾದ ಎಮ್.ಎಸ್.ಸನ್ನಲಿಂಗನವರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಫಾಟನೆ ನೆರವೇರಿಸಿದರು ನಂತರ ಮಾತನಾಡಿದ ಅವರು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರಚಿಸಿಕೊಂಡಂತಹವುಗಳೇ ಕಾನೂನುಗಳು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರೆ ಅಪರಾಧಗಳಿಗೆ ಪ್ರಾಥಮಿಕ ಹಂತದಲ್ಲಿ ಕಡಿವಾಣ ಹಾಕಲು ಸಾಧ್ಯ ಎಂದರು. ದೇಶದ ನಾಳಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಮುಖ್ಯ ಎಂದರು. ಮಕ್ಕಳಿಗೆ ಕಾನೂನು ಅರಿವಿನ ಮಹತ್ವವನ್ನು ತಿಳಿಸಬೇಕು. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಸಂಚಾರಿ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಭಾಷಣ ಮಾಡಿದ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್.ಎಸ್.ಅಂಗಡಿ ರವರು ಮಾತನಾಡಿ ಸಮಾಜದಲ್ಲಿ ಕಾನೂನು ಉಲ್ಲಂಘನೆಯಾದಾಗ ಹಾಗೂ ಅಶಾಂತಿ ವಾತಾವರಣ ಉಂಟಾದಾಗ ವಿದ್ಯಾರ್ಥಿಗಳು ಕಾನೂನು ಪಾಲಿಸಿ ಸಾಮಾಜಿಕ ಬದಲಾವಣೆಗೆ ಕಾರಣರಾಗಬೇಕು ಎಂದು ಸಲಹೆ ನೀಡಿದರು. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇತರ ಅನಾವಶ್ಯಕ ಕಾರ್ಯಗಳನ್ನು ಮಾಡದೇ ಕೇವಲ ಶಿಕ್ಷಣದತ್ತ ಗಮನ ಹರಿಸಬೇಕು. ಎಲ್ಲರೂ ಕೀಳರಿಮೆ ಬಿಟ್ಟು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಶಾಲಾ ಮಕ್ಕಳು ತಮ್ಮ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ತಿಳಿಸಿದರು
ಅತಿಥಿ ಭಾಷಣ ಮಾಡಿದ ನ್ಯಾಯವಾದಿಗಳ ಸಂಘದ ಮಹಿಳಾ ಪ್ರತಿನಿಧಿ ಎಸ್.ವಾಯ್.ಶಿಬಾರಗಟ್ಟಿ ರವರು ಮಾತನಾಡಿ ಮಹಿಳೆಯರು, ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿ ದಿಸೆಯಲ್ಲಿ ಸಂವಿಧಾನವನ್ನು ತಿಳಿದು ಕಾನೂನಿಗೆ ಗೌರವ ನೀಡುತ್ತಾ ಜೀವನವನ್ನು ಸುಂದರ ಮತ್ತು ಸಾರ್ಥಕವಾಗಿ ರೂಪಿಸಿಕೊಳ್ಳಬೇಕು. ಕಾನೂನು ಅರಿತು ನಡೆದರೆ ಸಮಸ್ಯೆಗಳನ್ನು ಸರಳವಾಗಿ ನಿಭಾಯಿಸಬಹುದು. ಕಾನೂನಿಗೆ ಗೌರವ ನೀಡಿದರೆ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುತ್ತದೆ. ಆದ್ದರಿಂದ ಪಠ್ಯದ ಜತೆ ಕಾನೂನು ಅರಿವನ್ನು ಹೊಂದುವುದು ಮುಖ್ಯವಾಗಿದೆ ಎಂದರು.
ಉಪನ್ಯಾಸ ಭಾಷಣ ಮಾಡಿದ ನ್ಯಾಯವಾದಿಗಳಾದ ಎ.ಎನ್.ಪವಾಡಶೆಟ್ಟರ ರವರು ಮಾತನಾಡಿ ಪ್ರತಿವರ್ಷ ಆಗಸ್ಟ್ 12 ರಂದು ಅಂತರಾಷ್ಟ್ರೀಯ ಯುವ ದಿನವನ್ನು ಆಚರಣೆ ಮಾಡಲಾಗುತ್ತದೆ. ಜಗತ್ತಿನಲ್ಲಿ ಎಲ್ಲಾ ವಿಭಾಗದಲ್ಲಿ ದುಡಿಯುವ ಕೈಗಳಲ್ಲಿ ಪ್ರಮುಖವಾಗಿ ಯುವ ಜನಾಂಗಕ್ಕೆ ಆದ್ಯತೆ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹ ದುಡಿಯುವ ಕೈಗಳಿಗೆ ಉದ್ಯೋಗ ಸಿಗುವುದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಸರ್ಕಾರಗಳು ಯುವಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಆರ್.ಪಿ.ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು ಶಿಕ್ಷಕರಾದ ಆರ್.ಸಿ.ಬಾರಾಟಕ್ಕೆ ಹಾಗೂ ಇತರರು ಉಪಸ್ಥಿತರಿದ್ದರು.
ಶಿಕ್ಷಕರಾದ ಎಸ್.ಬಿ.ಕಿವಡಿ ರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
