
ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಡ ಕೂಲಿಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಜನಪರ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪುರಸಭೆ ಮುಂದೆ ಧರಣಿ ನಡೆಸಿ, ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಬೈಲಹೊಂಗಲ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ 14 ವರ್ಷಗಳಿಂದ ಅರ್ಜಿ ಸಲ್ಲಿಸಿದ ನಿವೇಶನ ರಹಿತ ಬಡವರಿಗೆ ಇಲ್ಲಿಯ ವರೆಗೂ ಯಾವುದೇ ನಿವೇಶನ ಹಂಚಿಕೆ ಮಾಡಿರುವುದಿಲ್ಲ ರಾಮದುರ್ಗ ತಾಲೂಕಿನ ರಂಕಲಕೊಪ್ಪ ಗ್ರಾಮದಲ್ಲಿ ಹಿಂದಿನ ಪುರಸಭೆ ಅಧ್ಯಕ್ಷ ಸುರೇಶ ಪತ್ತೇಪೂರ 5 ಎಕರೆ ಭೂಮಿಯನ್ನು ತೆಗೆದುಕೊಂಡಿದ್ದು, ಇಲ್ಲಿಯ ವರೆಗೆ ಅಲ್ಲಿ ಯಾವುದೇ ನಿವೇಶನ ಹಂಚಿಕೆ ಮಾಡಿರುವುದಿಲ್ಲ.
ಕೂಡಲೇ ಪಟ್ಟಣದಲ್ಲಿ ವಾಸವಿರುವ, ಕೂಲಿ ಕಾರ್ಮಿಕರು, ಬಡ ನೇಕಾರರು, ದಲಿತರು, ಅಂಗವಿಕಲರು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಸ್ಥರಿಗೆ ಕೂಡಲೇ ನಿವೇಶನ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಜನಪರ ಟ್ರಸ್ಟ್ ಹಾಗೂ ಜನಸಾಮಾನ್ಯರ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಳ ನೇತೃತ್ವದಲ್ಲಿ ಬೃಹತ್ ಅನಿರ್ಧಿಷ್ಠಾವಧಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜನಪರ ಟ್ರಸ್ಟ ಅಧ್ಯಕ್ಷ ಸುಭಾಸ್ ಗೋಡಕೆ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಐ.ಕೆ. ಗುಡದಾರಿ, ತಮ್ಮ ಮನವಿಯನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸುವ ಮೂಲಕ ಪುರಸಭೆಯಿಂದ ಈ ಕುರಿತು ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ವಿನಯ ಚಂದರಗಿ, ಅಭಿ ಮುನವಳ್ಳಿ, ಧಾರಾಸಿಂಗ ಗೋಸಾವಿ, ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಬಿ.ಯು. ಬೈರಕದಾರ, ಶ್ರೀಕಾಂತ ಪೂಜಾರ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪಟ್ಟಣದ ಸಾರ್ವಜನಿಕರು ಭಾಗವಹಿಸಿದ್ದರು


