
ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಏರ್ಪಡಿಸಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಉದ್ಘಾಟಿಸಿ ಅವರು ಮಾತನಾಡಿದರು.
ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930 ರ ಆ.01 ರಂದು ಜನಿಸಿದರು. ತಮ್ಮ 10 ನೇ ವಯಸ್ಸಿನಲ್ಲಿ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿ ಆದರು. ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತಿçÃಯ ಸಂಗೀತದಲ್ಲಿ ವಿಶೇಷ ಪರಿಣಿತಿ ಸಾಧಿಸಿ ಬಹುಮುಖ ಪ್ರತಿಭೆ ಹೊಂದಿದ್ದರು ಎಂದು ಅವರು ತಿಳಿಸಿದರು.
ಅಂದಿನ ಸಮಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ಆವರಿಸಿದ್ದಾಗ ಶಿಕ್ಷಣ ಪಡೆಯುತ್ತಿದ್ದ ಕಾಶಿಯಿಂದ ಆಗಮಿಸಿ, ನೂರಾರು ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಿ ದಾಸೋಹ ನಡೆಸಿದರು. ಗೋಶಾಲೆಗಳನ್ನು ಆರಂಭಿಸಿ ಮೇವು ಮತ್ತು ನೀರಿನ ವ್ಯವಸ್ಥೆ ಕೈಗೊಂಡಿದ್ದರು ಎಂದು ಮೇಯರ್ ಅವರು ಮನನ ಮಾಡಿದರು.
ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 1ನ್ನು ರಾಜ್ಯ ಸರ್ಕಾರವು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ಆದೇಶಿಸಿದ್ದು, ಇಂದಿನ ಯುವಪೀಳಿಗೆಯು ಯಾವುದೇ ತರಹದ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಆರೋಗ್ಯಕರ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್‌ಜಿಟಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಸವರಾಜ ಅಮಾತಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮನಸ್ಸು, ದೇಹ, ಕುಟುಂಬ ಹಾಗೂ ದೇಶದ ಸ್ವಾಸ್ಥö್ಯ ಹಾಳು ಮಾಡುವ ವ್ಯಸನ ದಾಸ್ಯವೂ ಸಾಮಾಜಿಕ ಪಿಡುಗುಗಳಲ್ಲಿ ಒಂದು. ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ಜೀವ ಕಳೆದುಕೊಂಡ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಮಹಾಂತ ಶಿವಯೋಗಿ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡು ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತರು. ಇಂತಹ ದುಶ್ಚಟಗಳಿಗೆ ಒಳಗಾಗಿರುವವರನ್ನು ವ್ಯಸನ ಮುಕ್ತಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆಯನ್ನು 1975 ರಿಂದ ಆರಂಭಿಸಿ ಯಶಸ್ವಿಯಾದರು ಎಂದು ಹೇಳಿದರು.
ಡಾ.ಮಹಾಂತ ಶಿವಯೋಗಿಯವರು ಮನೆ-ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿದವರು. ಸ್ವಾಮಿಗಳ ಮಾತುಗಳಿಗೆ ಮನಃ ಕರಗಿ ಪರಿವರ್ತನೆಯಾದ ಜನರು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿಯವರ ಜೋಳಿಗೆಗೆ ಹಾಕಿ, ಇನ್ನುಂದೆ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ಶಾಸ್ತ್ರಜ್ಞ ಡಾ.ರೋಹನ್ ವನಗುಂದಿ ಅವರು ಮಾತನಾಡಿ, ಮಾದಕ ವಸ್ತು ವ್ಯಸನಿಗಳಾಗಿದ್ದಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಟೆಲಿ ಮೆನಸ್ ಎಂಬ 14416 ಉಚಿತ ಸಹಾಯವಾಣಿ ಆರಂಭಿಸಿದ್ದು, ಸಹಾಯವಾಣಿಗೆ ಕರೆ ಮಾಡಿ ಆಪ್ತಸಮಾಲೋಚನೆ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ಮದ್ಯಪಾನ, ಮಾದಕವಸ್ತು, ತಂಬಾಕು ವಸ್ತುಗಳ ವ್ಯಸನ ಮುಕ್ತನಾಗುತ್ತೇನೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಬಳ್ಳಾರಿಯ ಸಂಗೀತ ಶಿಕ್ಷಕ ಕೆ.ದೊಡ್ಡಬಸವ ಗವಾಯಿ ಅವರಿಂದ ವ್ಯಸನಗಳ ಕುರಿತ ಸುಗಮ ಸಂಗೀತ ಕಾರ್ಯಕ್ರಮವು ಕೇಳುಗರ ತಲೆದೂಗುವಂತಿತ್ತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಜಾಥಾಗೆ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಅವರು ಚಾಲನೆ ನೀಡಿದರು.
ಜಾಥಾವು ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿನ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣದವರೆಗೆ ತಲುಪಿ ಸಂಪನ್ನಗೊಂಡಿತು.
ಜಾಥಾದಲ್ಲಿ ‘ಕುಡಿತಕ್ಕಿಳಿಯುವ ಮೊದಲು ನೆನಪಾಗಲಿ-ನಿಮ್ಮ ಮುದ್ದು ಮಗುವಿನ ತೊದಲು’, ‘ಬಿಡಿರೋ ಬಿಡಿರೋ ಕುಡಿತವ-ಕಾಣಿರೋ ಸುಖ ಸಂತೋಷದ ನವಜೀವನ’, ‘ಆಗದಿರಿ ಮಾದರಿ ವ್ಯಸನಿ-ಆಗಿರಿ ಬದುಕಿಗೆ ಸಂಜೀವಿನಿ’, ‘ಮಡದಿ ಮಕ್ಕಳು ಸುಂದರ ಸಂಸಾರ-ಕುಡಿತದಿಂದ ಎಲ್ಲವೂ ನಿಸ್ಸಾರ’, ‘ಕುಡಿತದಾಸೆಗೆ ಕಡಿವಾಣ-ಹಾಕಿದವನೇ ಬಲುಜಾಣ’ ಎನ್ನುವ ಜಾಗೃತಿ ಮಾಹಿತಿ ಫಲಕಗಳು ವಿದ್ಯಾರ್ಥಿಗಳ ಕೈಯಲ್ಲಿ ರಾರಾಜಿಸಿದವು.
ಈ ಸಂದರ್ಭದಲ್ಲಿ ಮಹಾಣಗರ ಪಾಲಿಕೆಯ ಉಪಮೇಯರ್ ಡಿ.ಸುಕುಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದಸ ಗುರುರಾಜ.ವಿ.ಸಿ., ಸಿಬ್ಬಂದಿಗಳಾದ ಮಲ್ಲೇಶಪ್ಪ, ಹನುಮೇಶ್, ತಿಪ್ಪೇಸ್ವಾಮಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


