
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಕಾಶಿಪೇಟೆಯ ತಾರಮ್ಮ ನಾಗರಾಳ ಮತ್ತು ಮುಗಳಿ ಅವರ ನಿವಾಸದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ಶಂಕ್ರಣ್ಣ ಮುರುಡಿ ಪಾಲ್ಗೊಂಡು ಮಾತನಾಡಿದರು ಖಾದಿ ಉತ್ಪನ್ನ ಬಟ್ಟೆಗಳಿಗೆ ಸರಕಾರ ಪೂರಕ ವಾತಾವರಣ ಕಲ್ಪಿಸುವ ಮೂಲಕ ನಸಿಸಿ ಹೋಗುತ್ತಿರುವ ಕೈಮಗ್ಗ ನೇಕಾರಿಕೆಗೆ ಉತ್ತೇಜನ ನೀಡಬೇಕು ಕಾಲ ಬದಲಾದಂತೆ ನೇಕಾರಿಕೆಯು ಬದಲಾವಣೆ ಹಾದಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಸರಕಾರ ವಿವಿಧ ಇಲಾಖೆ ಸಿಬ್ಬಂದಿಗೆ ಕೈಮಗ್ಗ ಉತ್ಪನ್ನಗಳ ವಸ್ತ್ರಗಳನ್ನು ಕಡ್ಡಾಯವಾಗಿ ಬಳಸುವಂತೆ ಅದೇಶ ನೀಡಿದಲ್ಲಿ ನೇಕಾರಿಕೆ ಉಳಿಯುತ್ತದೆ ಎಂದು ಹೇಳಿದರು.
ನೇಕಾರ ಸಮುದಾಯಗಳ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಕುರುಡಗಿ ಅವರು ಮಾತನಾಡಿ, ವಿಶ್ವದಲ್ಲಿ ಭಾರತದಲ್ಲಿನ ಕೈಮಗ್ಗ ನೇಕಾರಿಕೆ ಉತ್ಪನ್ನಗಳಿಗೆ ಭಾರಿ ಮಾರುಕಟ್ಟೆ ಇತ್ತು. ಆದರೆ ಬ್ರಿಟಿಷರು ವಿದೇಶಿ ಬಟ್ಟೆಗಳನ್ನು ಆಮದು ಮಾಡಿದ್ದರಿಂದ ಸ್ವದೇಶಿ ಬಟ್ಟೆ ವ್ಯಾಪಾರಕ್ಕೆ ಹಿನ್ನೆಡೆ ಉಂಟಾಯಿತು ಎಂದು ಹಿಂದಿನ ಹೋರಾಟದ ಹಾದಿಯನ್ನು ವಿವರಿಸಿದರು.
ನಿರಂಜನಸ್ವಾಮಿ ದೇವಾಂಗಮಠ ಸಾನಿಧ್ಯ ವಹಿಸಿದ್ದರು. ಮುಖಂಡರಾದ ನಾರಾಯಣಪ್ಪ ಬೆನ್ನೂರ, ವಿಠ್ಠಲ ಕಲ್ಲೂರ, ಪ್ರಕಾಶ ಸುಳಿಭಾವಿ, ಈರಣ್ಣ ಕೊಳ್ಳಿ, ಮಾರುತಿ ಗಿಡ್ನಂದಿ, ದುರ್ವಾಸಪ್ಪ ಹೆಬ್ಬಳ್ಳಿ, ಈರಣ್ಣ ನಂದಿ, ಬಸವರಾಜ ಮುಳಗುಂದಗೌಡ್ರ, ವಿನೋದ ಕರದಿನ ಸೇರಿದಂತೆ ನೇಕಾರ ಸಮುದಾಯಗಳ ಒಕ್ಕೂಟ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಹಿರಿಯರು ಉಪಸ್ಥಿತರಿದ್ದರು.


