
ರಾಮದುರ್ಗ ಕ್ಷೌರ ಮಾಡುವ ವಿಚಾರದಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿರುವ ಪರಿಶಿಷ್ಟ ಜಾತಿ ಯುವಕ ಯಮನೂರಪ್ಪ ಕೊಲೆ ಜಾತಿ, ದೌರ್ಜನ್ಯ ಹಾಗೂ ಅಸ್ಪೃಶ್ಯತೆಗೆ ಕರಾಳ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಕೊಲೆಯಾದವನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕೆಂದು ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಎಂ. ಜೈನೆಖಾನ್ ಮಾತನಾಡಿ, ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕು 78 ವರ್ಷವಾದರೂ ಇನ್ನೂವರೆಗೆ ಅಸ್ಪೃಶ್ಯತೆಯ ಆಚರಣೆಗಳು ನಡೆಯುತ್ತಲಿವೆ ಹಾಗೂ ಜಾತಿ ಆಧಾರಿತ ತಾರತಮ್ಯಗಳು ಅಡೆತಡೆಯಿಲ್ಲದೆ ರಾಜಾರೋಷವಾಗಿ ನಡೆದಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಸಾವಿರಾರು ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದ ಜನರಿಗೆ ಕ್ಷೌರ ನಿರಾಕರಣೆ ಅಭಾದಿತವಾಗಿ ಮುಂದುವರೆದಿದೆ. ಎಷ್ಟೋ ಜನ ನಗರ ಪ್ರದೇಶಗಳಿಗೆ ಹೋಗಿ ಕ್ಷೌರ ಮಾಡಿಕೊಂಡು ಬರುವ ಪರಿಸ್ಥಿತಿ ಬಂದಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು. ದಲಿತರಿಗೆ ರಕ್ಷಣೆ ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ನಾಗಪ್ಪ ಸಂಗೊಳ್ಳಿ, ತುಳಸಮ್ಮ ಮಾಳದಕರ, ಮೀನಾಕ್ಷಿ ಸಂಶಿ, ರಾಚವ್ವ ರಾಮದುರ್ಗ, ಫಾರೂಖ್ ಶೇಖ್ ಮುಂತಾದವರು ಪಾಲ್ಗೊಂಡಿದ್ದರು.


