ಬೆಳಗಾವಿ ಸೆ.15ರಂದು ಪ್ರಜಾಪ್ರಭುತ್ವ ದಿನಾಚರಣೆ ಜಿಲ್ಲೆಯಲ್ಲಿ 145 ಕಿ.ಮೀ. ಬೃಹತ್ ಮಾನವ ಸರಪಳಿ ನಿರ್ಮಾಣ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

WhatsApp Group Join Now

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿದರು

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತ ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಮಹತ್ವವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೆ.15. ರಂದು ಜಿಲ್ಲೆಯಲ್ಲಿ 145 ಕಿ.ಮೀ. ಉದ್ದದ ಬೃಹತ್ ಮಾನವ ಸರಪಳಿ ನಿರ್ಮಿಸಲಾಗುವುದು ಸಂವಿಧಾನದ ಮೌಲ್ಯ ಹಾಗೂ ಅದರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು ಕಳೆದ ವರ್ಷ ಸೆ. 15ರಂದು ಸಂವಿಧಾನ ಪಿಠೀಕೆಯನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಗಿತ್ತು.

ಈ ಬಾರಿ ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಮೂವತ್ತು ಜಿಲ್ಲೆಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಭಾರತದ ಸಂವಿಧಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವದು ಎಂದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯಿಂದ ಜೋಡಿಸಲಾಗುವ ಮಾನವ ಸರಪಳಿಯು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಿಂದ ಪ್ರಾರಂಭವಾಗಿ ಕಿತ್ತೂರ ತಾಲೂಕಿನ ತೇಗೂರ ಗ್ರಾಮಕ್ಕೆ ಕೊನೆಗೊಳ್ಳುತ್ತದೆ.
ಜಿಲ್ಲೆಯಲ್ಲಿ 145 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ಸರಪಳಿ ನಿರ್ಮಿಸಲು ಯೋಜಿಸಲಾಗಿದೆ.

ಅಂದಾಜು ಒಂದು ಲಕ್ಷ ಇಪ್ಪತ್ತೈದು ಸಾವಿರ ಜನ ಭಾಗಿಯಾಗುವ ನೀರಿಕ್ಷೆ ಹೊಂದಲಾಗಿದೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ, ಕೆ.ಚಂದರಗಿ, ಸವದತ್ತಿ ತಾಲೂಕಿನ ಸೋಪಡ್ಲ್, ಯರಗಟ್ಟಿ, ಇಂಚರಲ ಕ್ರಾಸ್, ಬೈಲಹೊಂಗಲ ತಾಲೂಕಿನ ನೇಸರಗಿ ಕ್ರಾಸ್, ಸುತಗಟ್ಟಿ ಕ್ರಾಸ್, ಬೆಳಗಾವಿ ತಾಲೂಕಿನ ಕರಡಿಗುದ್ದಿ, ಸಾಂಬ್ರಾ, ಬೆಳಗಾವಿ ನಗರ, ಸುವರ್ಣ ವಿಧಾನ ಸೌಧ, ಹಿರೇಬಾಗೆವಾಡಿ, ಎಂ.ಕೆ.ಹುಬ್ಬಳ್ಳಿ, ಇಟಗಿ ಕ್ರಾಸ್, ಚನ್ನಮನ ಕಿತ್ತೂರು ಮಾರ್ಗವಾಗಿ ತೇಗೂರ ಗ್ರಾಮದ ವರೆಗೆ ಮಾನವರ ಸರಪಳಿಯನ್ನು ನಿರ್ಮಿಸಲಾಗುವದು. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸೆ. 15 ರಂದು ಬೆಳಗ್ಗೆ 9.30 ರಿಂದ 10.30ರ ವರೆಗೆ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಗ್ರಾಮ ಪಂಚಾಯತಗಳ ಅಧ್ಯಕ್ಷರು, ಸದಸ್ಯರು, ಸಂಘ-ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿ ಗ್ರಾಮಗಳಿಂದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುವಂತೆ ಕ್ರಮ ವಹಿಸಲಾಗಿದೆ. ಸ್ಥಳೀಯವಾಗಿ ತಂಡಗಳನ್ನು ರಚಿಸಿಲಾಗಿದ್ದು, ಪ್ರತಿ 200 ಮೀ.ಗೆ ಒಬ್ಬ ಸೆಕ್ಟೆರ್ ಅಧಿಕಾರಿಯನ್ನು, ಪ್ರತಿ 1 ಕಿ.ಮೀ. ತಾಲೂಕು ಮಟ್ಟದ, ಹಾಗೂ ಪ್ರತಿ 5 ಕಿ.ಮೀ. ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇಮಿಸಲಾಗಿದೆ.

ಮಾನವ ಸರಪಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜನರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೆ.ಎಸ್.ಆರ್.ಟಿ.ಸಿ ಹಾಗೂ ಶಾಲಾ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

About The Author