
ಹೈನುಗಾರಿಕೆ ರೈತರ ಬದುಕಿನ ಜೀವಾಳವಾಗಿದೆ:ಡಾ.ವಿ.ಎಂ.ಕೌಜಲಗಿ
ಬೆಟಗೇರಿ: ಸ್ಥಳೀಯ ರೈತರು ನಿತ್ಯದ ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೆಎಂಎಫ್‌ನಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ಹಲವಾರು ಸಹಾಯ, ಸೌಲಭ್ಯಗಳಿವೆ. ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ಗೋಕಾಕ ಘಟಕದ ಉಪಕೇಂದ್ರಾಧಿಕಾರಿ ಡಾ.ವಿ.ಎಂ.ಕೌಜಲಗಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸೆ.೧೭ ರಂದು ನಡೆದ ೨೦೨೩-೨೪ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆಯಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿ, ಹೈನುಗಾರಿಕೆ ರೈತರ ಬದುಕಿನ ಜೀವಾಳವಾಗಿದೆ. ಬೆಳಗಾವಿ ಹಾಲು ಒಕ್ಕೂಟದಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ರೈತರಿಗೆ ದೊರಕುವ ವಿವಿಧ ಸಹಾಯ, ಸೌಲಭ್ಯಗಳ ಕುರಿತು ತಿಳಿಸಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ವಾರ್ಷಿಕ ವರದಿ ಮಂಡಿಸಿ ಸಂಘವು ಸನ್೨೦೨೩-೨೪ನೇ ಸಾಲಿನಲ್ಲಿ ೧೭,೬೨,೪೮೫ರೂ.ಗಳ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರ ಸದಸ್ಯರಿಗೆ ಶೇ೨೦ರಷ್ಟು ೩೯,೪೪೦ರೂಗಳ ಡಿವ್ಹಿಡೆಂಡ್, ಶೇ೬೫ರಷ್ಟು ಒಟ್ಟು ೮,೧೬,೩೯೧ರೂ.ಗಳ ಬೋನಸ್ ಸದಸ್ಯರಿಗೆ ವಿತರಿಸಲಾಗುವದು ಎಂದರು.
ಸಂಘದ ಅಧ್ಯಕ್ಷ ಯಲ್ಲಾಲಿಂಗ ದೇಯಣ್ಣವರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಶೇರ ಸದಸ್ಯರು, ಗ್ರಾಹಕರು, ಗ್ರಾಮದ ಪ್ರಮುಖ ನಾಗರಿಕರ ಜೋತೆ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು ಸಂಘದ ಸಮಗ್ರ ಪ್ರಗತಿಯ ಕುರಿತು ಹಲವಾರು ವಿಷಯಗಳನ್ನು ಈ ವೇಳೆ ಚರ್ಚಿಸಿದರು.
ಬಹುಮಾನ ವಿತರಣೆ:ಸನ್೨೦೨೩-೨೪ನೇ ಸಾಲಿನಲ್ಲಿ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಆಕಳು ಮತ್ತು ಎಮ್ಮೆ ಹಾಲು ವಿಭಾಗದಲ್ಲಿ ಅತಿ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಿಗೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನಗಳಿಗೆ ಹಾಗೂ ೨ಸಾವಿರ ರೂಪಾಯಿಕ್ಕಿಂತ ಹೆಚ್ಚು ಭೋನಸ್ ಹಣ ಪಡೆದ ಸಂಘದ ಸದಸ್ಯರಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ತ್ರಾಮದ ಹಾಂಡೆ ಸೇರಿದಂತೆ ಗೃಹೋಪಯೋಗಿ ಉಪಕರಣಗಳನ್ನು ಬಹುಮಾನ ರೂಪದಲ್ಲಿ ನೀಡಿ ಸನ್ಮಾನಿಸಿದರು.
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ಗೋಕಾಕ ಘಟಕದ ವಿಸ್ತರಣಾಧಿಕಾರಿ ಗೋಪಾಲ ಭಂಡಾರಿ, ಮಲ್ಲಿಕಾರ್ಜುನ ಪೇದನ್ನವರ, ಮಹಾದೇವ ಕಂಬಿ, ಸಿದ್ಧೇಶ್ವರ ಕುರಬೇಟ, ಅರ್ಜುನ ಬ್ಯಾಗಿ, ಶಿವಪ್ಪ ಬಳಿಗಾರ, ವಿಜಯ ಮಠದ, ಮಹಾದೇವ ಮಾಳೇದ, ಸತ್ತೆಪ್ಪ ಹೊರಟ್ಟಿ, ಸುರೇಶ ತಳವಾರ, ಬಸಪ್ಪ ತೋಟಗಿ, ಸಿದ್ದಪ್ಪ ಕೋಣಿ, ಸ್ಥಳೀಯ ಹಾಉಸಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಶೇರ ಸದಸ್ಯರು, ಗ್ರಾಹಕರು, ಇತರರು ಇದ್ದರು.


