ರಾಮದುರ್ಗ, ಕೇಂದ್ರ ಸರಕಾರ ಹಿಂದಿರುವ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿ ದುಡಿಯುವ ಜನರನ್ನು ಗುಲಾಮಗಿರಿಗೆ ತಳ್ಳುತ್ತಿರುವ ನೀತಿಯನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲೆ ರಾಮದುರ್ಗ ಮಿನಿ ವಿಧಾನಸೌಧದ ಎದುರು ಇರುವ ರಸ್ತೆಯನ್ನು ಸುಮಾರು ಒಂದೂವರೆ ಗಂಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರಸ್ತೆ ತಡೆ ಮಾಡಿದ ಕಾರ್ಮಿಕ ಮುಖಂಡರನ್ನು ಮತ್ತು ಕಾರ್ಮಿಕರನ್ನು ಬಂಧಿಸಿದ ಪೋಲಿಸರು ನಂತರ ಬಿಡುಗಡೆ ಮಾಡಿದರು.
ಕೇಂದ್ರ ಸರಕಾರವು ಕಾರ್ಮಿಕ ಕಾನೂನುಗಳನ್ನು ಬಂಡವಾಳದಾರರ ಪರವಾಗಿ ತಿದ್ದುಪಡಿ ಮಾಡಿ ಅದನ್ನು ಜಾರಿ ಮಾಡಲು ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರುತ್ತಿದೆ. 2019-20ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ್ದು ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನದಿಂದ ಕಾರ್ಮಿಕ ಪ್ರತಿರೋಧ ಎದುರಿಸಬೇಕಾದ ಭಯದಲ್ಲಿರುವ ಮೋದಿ ಸರಕಾರ, ಇದನ್ನು ರಾಜ್ಯಗಳ ತಲೆಗೆ ಕಟ್ಟಿ ನುಣುಚಿಕೊಳ್ಳುತ್ತಿದೆ. ರಾಜ್ಯ ಸರಕಾರವೂ ಸಹ ಕೇಂದ್ರದ ಹಾದಿಯಲ್ಲಿ ನಡೆದು ಕೇಂದ್ರ ಕಾರ್ಮಿಕ ಸಂಹಿತೆಗಳ ಜಾರಿಯ ಮೊದಲೇ 12 ಗಂಟೆ ಕೆಲಸ ಮಾಡಬೇಕೆಂದು ಕೈಗಾರಿಕಾ ಕಾಯ್ದೆ 1947 1948, 1970 ವಾಣಿಜ್ಯ ಸಂಸ್ಥೆ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದೆ ಎಂದು ಕಾರ್ಮಿಕ ಮುಖಂಡ ಜಿ.ಎಮ್.ಜೈನೆಖಾನ್ ಖಾರವಾಗಿ ಮಾತನಾಡಿದರು.
ಚೌಕಾಸಿ ಕಾಯ್ದೆಯೂ ಬದಲಾವಣೆ ಮಾಡಿ, ನೇರವಾಗಿ ಕಾರ್ಮಿಕರೇ ಸಮಸ್ಯೆಯ ಚರ್ಚೆಗೆ ಬರಬೇಕೆಂದು ತಿದ್ದುಪಡಿ ಮಾಡಿ ಹೋರಾಟದ ಹಕ್ಕು ಹಾಗೂ ಕಾರ್ಮಿಕ ಸಂಘಟನೆ ನೊಂದಣಿ ಮಾಡಿಕೊಳ್ಳುವ ಕಾಯ್ದೆ ತೆಗೆದು ಹಾಕಲಾಗುತ್ತದೆ ಎಂದು ಜೈನೆಖಾನ್ ಸರಕಾರಗಳ ನೀತಿಯನ್ನು ಖಂಡಿಸಿದರು.
ಹಿಂದೆ ಬ್ರಿಟಿಷರ ವಿರುದ್ಧ ನಿರಂತರ ಹೋರಾಟ ನಡೆಸಿದ್ದರ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು, ಅದೇ ಸಮಯದಲ್ಲಿ ಕಾರ್ಮಿಕರಿಗೆ ಸೌಲಭ್ಯ ನೀಡುವ ಕಾನೂನುಗಳು ಬಂದವು. ಈಗ ಸರಕಾರಗಳು ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದೆ ಎಂದು ಕಾರ್ಮಿಕ ಮುಖಂಡರಾದ ನಾಗಪ್ಪ ಸಂಗೊಳ್ಳಿ. ಕೃಷ್ಣಾ ಹೊಸೂರ. ಮಾತನಾಡಿದರು. ಸರಸ್ವತಿ ಮಾಳಶೆಟ್ಟಿ ಸ್ವಾಗತಿಸಿದರು. ವೀರಭದ್ರ ಕಂಪ್ಲಿ ವಂದಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘ ಮುಖಂಡ ಹನಮಂತ ಜಾಧವ, ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಮಾರುತಿ ಮುದಗುರಿ, ಪಂಚಾಯತ ನೌಕರರ ಸಂಘದ ಮುಖಂಡ ದೀಲಿಪ್ ಬೋವಿ, ಕೇಶವ ದಾಸರ, ಅಂಗನವಾಡಿ ನೌಕರರ ಸಂಘದ ಮುಖಂಡೆ ಕಲ್ಪನಾ ಮರಡಿಮಠ, ಬೋರವ್ವ ತೆಕ್ಕಿ, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡೆ ತುಳಸಮ್ಮ ಮಾಳದಕರ, ರುಕೃವ್ವ ಬಿಜ್ಜನ್ನವರ, ಡಬ್ಬಾ ಅಂಗಡಿ ಸಂಘಟನೆಯ ಫಾರೂಖ್ ಶೇಖ್, ಮಹಬೂಬ ನದಾಫ ಮತ್ತು ನೂರಾರು ಜನ ಅಂಗನವಾಡಿ ನೌಕರರು, ಬಿಸಿ ಊಟದ ನೌಕರರು, ಪಂಚಾಯತ ನೌಕರರು, ಕಟ್ಟಡ ಕಾರ್ಮಿಕರು, ಸಕ್ಕರೆ ಕಾರ್ಖಾನೆಯ ಕಾರ್ಮಿಕರು, ಸಂಜೀವಿನಿ ನೌಕರರು, ಸ್ವಚ್ಛ ವಾಹಿನಿ ನೌಕರರು ಮತ್ತು ಕಾಯಕ ಮಿತ್ರ ನೌಕರರು ಭಾಗವಹಿಸಿದ್ದರು.



