ಕಲಹಾಳ ಶಾಲೆ ಆವರಣದಲ್ಲಿ ಅಕ್ರಮ ಶೆಡ್‌ಗಳಲ್ಲಿ ವಾಸವಿರುವ ದಲಿತ ಕುಟುಂಬಗಳಿಗೆ ಪರ್ಯಾಯ ನಿವೇಶನದ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಡಿಎಂಸಿ ಪದಾಧಿಕಾರಿಗಳು ಜಿಪಂ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ರಾಹುಲ್ ಶಿಂಧೆ ಅವರಿಗೆ ಮನವಿ ಸಲ್ಲಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆ ಆವರಣದ ಜಾಗೆಯಲ್ಲಿ ಅಕ್ರಮ ಶೆಡ್‌ಗಳಲ್ಲಿ ವಾಸವಿರುವ ದಲಿತ ಕುಟುಂಬಗಳಿಗೆ ಪರ್ಯಾಯ ನಿವೇಶನದ ವ್ಯವಸ್ಥೆ ಕಲ್ಪಿಸಿ, ಶಾಲಾ ಮಕ್ಕಳಿಗೆ ಆಗುತ್ತಿರುವ ಅಡಚಣೆಯನ್ನು ತಪ್ಪಿಸುವಂತೆ ಒತ್ತಾಯಿಸಿ ಶಾಲಾ ಎಸ್‌ಡಿಎಂಸಿ ಪದಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ರಾಹುಲ್ ಶಿಂಧೆ ಅವರಿಗೆ ಮನವಿ ಸಲ್ಲಿಸಿದರು.
ಎರಡು ದಶಕದ ಹಿಂದೆ ಅತೀಯಾಗಿ ಮಳೆ ಸುರಿದಿದ್ದರಿಂದ ದಲಿತ ಸಮುದಾಯದ ಓಣಿಯಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ನಿರಾಶ್ರಿತರಾದ ಸುಮಾರು 10 ಕುಟುಂಬಗಳಿಗೆ ಗ್ರಾಮದ ಗೋವಿಂದಗೌಡ ಪಾಟೀಲ ಅವರ ಸಹೋದರ ಜಗದೀಶಗೌಡ ಪಾಟೀಲ ಎಂಬುವರ 1 ಎಕರೆ ಜಮೀನಿನಲ್ಲಿ ವಾಸ ಮಾಡಲು ಜಮೀನು ಮಾಲಿಕರು ಮೌಖಿಕ ಅನುಮತಿ ನೀಡಿದ್ದರು. ಗ್ರಾಮಕ್ಕೆ ನೂತನ ಪ್ರೌಢ ಶಾಲೆ ಮಂಜೂರಾದಾಗ ಪಾಟೀಲ ಸಹೋದರರು ಹಾಗೂ ಹನಮಂತಗೌಡ ಕೆ. ಪಾಟೀಲ ಎಂಬುವರ ತಲಾ ಒಂದೊಂದು ಎಕರೆ ಜಮೀನು ಪ್ರೌಢ ಶಾಲೆಗೆ ದಾನವಾಗಿ ನೀಡಿದರು. 2016 ರಲ್ಲಿ ಪ್ರೌಢಶಾಲೆ ಕಟ್ಟಡ ನಿರ್ಮಾಣವಾಯಿತು. ಶಾಲೆಯ ಆವರಣದಲ್ಲಿ ಗುಡಿಸಲು/ಶೆಡ್ಡುಗಳನ್ನು ನಿರ್ಮಿಸಿಕೊಂಡು ದಲಿತ ಕುಟುಂಬಗಳು ಇಂದಿಗೂ ವಾಸಿಸುತ್ತಿವೆ.

ಶಾಲೆಯ ಆವರಣದಲ್ಲಿ ಕುಟುಂಬ ಸದಸ್ಯರ ವಾಸದಿಂದ ವಿದ್ಯಾರ್ಥಿಗಳ ಅಭ್ಯಾಸ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅಡಚಣೆ ಆಗುತ್ತಿದೆ. ವಸತಿಗೆ ಪರ್ಯಾಯ ವ್ಯವಸ್ಥೆ ಸರಕಾರ ಕಲ್ಪಿಸಿದಲ್ಲಿ ಶಾಲೆಯ ಆವರಣ ತೊರೆಯುತ್ತೇವೆ ಎಂದು ಅಲ್ಲಿ ವಾಸವಿರುವ ಕುಟುಂಬ ಸದಸ್ಯರು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಇತ್ತ ತಹಶೀಲ್ದಾರ್, ತಾಲೂಕು ಪಂಚಾಯಿತಿ ಇಓ, ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಜಿಪಂ ಸಿಇಓ ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಪ್ರತ್ಯೇಕ ಮನವಿ ಸಲ್ಲಿಸಿ, ಸರಕಾರ ದಲಿತ ಕುಟುಂಬಗಳಿಗೆ ಪರ್ಯಾಯ ವಸತಿ ಸೌಕರ್ಯ ಒದಗಿಸಿ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಅಭ್ಯಾಸ ಮಾಡಲು ಅನುಕೂಲ ಮಾಡುವಂತೆ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ರಾಮದುರ್ಗ ತಹಶೀಲ್ದಾರ್‌ರಿಂದ ಸಮಗ್ರ ಮಾಹಿತಿ ತರಿಸಿ, ಕಲಹಾಳ ಶಾಲೆಯ ಆವರಣದಲ್ಲಿ ವಾಸವಿರುವ ಸುಮಾರು 10 ಕುಟುಂಬಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಮಹದಾಯಿ ಹೋರಾಟಗಾರ ಗ್ರಾಮದ ಹನಮಪ್ಪ ಮಡಿವಾಳರ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‌ಡಿಇಎಂಸಿ ಉಪಾಧ್ಯಕ್ಷ ಹಣಮಂತಗೌಡ ಪಾಟೀಲ, ಗ್ರಾಮದ ಮುಖಂಡರಾದ ಕಲ್ಲಪ್ಪ ಜಗ್ಗಲ, ನಾರಾಯಣ ಹೂಲಗೇರಿ, ಶಂಕರಗೌಡ ಪಾಟೀಲ, ಶಿವನಗೌಡ ಪಾಟೀಲ, ಬಸವರಾಜ ಗುಡ್ಡದ, ಹನಮಂತ ಮಾದರ, ಶ್ರೀಶೈಲ ಮರಿಬಾಶೆಟ್ಟಿ, ನಾಗಪ್ಪ ಕಪಲಿ, ಶಿವಪ್ಪ ಕಂಬಳಿ, ಮಹದಾಯಿ ಹೋರಾಟಗಾರ ಹನಮಪ್ಪ ಮಡಿವಾಳರ, ನಿವೃತ್ತ ಮುಖ್ಯ ಶಿಕ್ಷಕ ಜಿ.ಐ. ಹಕಾಟಿ, ವೆಂಕಪ್ಪ ಡೊಂಬರಳ್ಳಿ ಇದ್ದರು.

About The Author