ಧಾರವಾಡ 70 ನೇ ಕರ್ನಾಟಕ ರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ನೆರವೇರಿಸಿದರು.

WhatsApp Group Join Now

ಧಾರವಾಡ ಜಿಲ್ಲಾಡಳಿತವು ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 70 ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಷ್ಟ್ರ ಧ್ವಜಾರೋಹಣವನ್ನು ಕಾರ್ಮಿಕ ಇಲಾಖೆ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ನೇರವೇರಿಸಿ, ಜಿಲ್ಲೆಯ ಸಾರ್ವಜನಿಕರನ್ನು ಉದ್ದೇಶಿಸಿ, ಮಾತನಾಡಿದರು.

ನಮ್ಮ ಧ್ವಜ ಬಾವುಟದಲ್ಲಿನ ಕೆಂಪು ಮತ್ತು ಹಳದಿ ಬಣ್ಣವು ನಮ್ಮ ರಾಜ್ಯದ ಶಕ್ತಿ, ಶೌರ್ಯ ಮತ್ತು ಸಾಂಸ್ಕøತಿಕ ಹೆಮ್ಮೆಯನ್ನು ತಿಳಿಸುತ್ತದೆ. ನಾಡಿನ ಭಾಷಯಾದ ಕನ್ನಡವು ನಮ್ಮ ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುತ್ತದೆ. ಕನ್ನಡ ಭಾಷಯು ಸುಮಾರು 2500 ವರ್ಷಗಳ ಹಳೆಯ ಭಾಷಯಾಗಿದ್ದು, ಹಲವಾರು ಉಪಭಾಷಗಳನ್ನು ಹೊಂದಿದೆ ಎಂದರು.

ಕರ್ನಾಟಕ ಏಕೀಕರಣ ಚಳವಳಿಯು ದೇಶದ ಸ್ವಾತಂತ್ರ್ಯ ಹೋರಾಟದಷ್ಟೇ ಪ್ರಮುಖ ಸ್ಥಾನವನ್ನು ಪಡೆದಿದೆ. 1956 ರಲ್ಲಿ ಕನ್ನಡ ಮಾತನಾಡುವ ವಿವಿಧ ಭಾಗಗಳು ಸೇರಿ ಮೈಸೂರು ರಾಜ್ಯವು ಉದಯವಾಯಿತು. ಕರ್ನಾಟಕ ಏಕೀಕರಣ ಚಳವಳಿಯನ್ನು ಹುಟ್ಟುಹಾಕಿದ್ದು ಧಾರವಾಡ ಜಿಲ್ಲೆ ಆಗಿದೆ. ಆಲೂರ ವೆಂಕಟರಾಯರು ಇದರ ಮೂಲ ಪುರುಷರು. ಏಕೀಕರಣ ಚಳವಳಿಯ ಪ್ರಮುಖರಾದ ರಾ.ಹ.ದೇಶಪಾಂಡೆರವರು, ಡೆಪ್ಯೂಟಿ ಚನ್ನಬಸಪ್ಪರವರು, ಅದರಗುಂಚಿ ಶಂಕರಗೌಡ ಪಾಟೀಲರು ಮತ್ತಿತರರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಚಿವರು ತಿಳಿಸಿದರು.

ಬಹು ಭಾಷ ಕವಿಗಳು ಆದ ಬೇಂದ್ರೆಯವರನ್ನು ಕುರಿತು ಒಬ್ಬ ವ್ಯಕ್ತಿ ನಿಮ್ಮ ಕನ್ನಡ ಪದ್ಯ ಬಹಳ ಚೆನ್ನಾಗಿದೆ ಎಂದು ಹೇಳಿದಾಗ, ತಮ್ಮಾ, ಪದ್ಯ ಬರೆಯೋಕೆ ಕನ್ನಡವೇ ಬಹಳ ಚೆನ್ನಾಗಿದೆ ಎಂದು ಹೇಳಿದ್ದು, ಅವರಿಗಿದ್ದ ಕನ್ನಡ ಪ್ರೇಮ ಮತ್ತು ಭಾಷೆಯ ಅಭಿಮಾನಕ್ಕೆ ಒಂದು ಉದಾಹರಣೆಯಾಗಿದೆ ಎಂದು ಸಚಿವರು ಸ್ಮರಿಸಿದರು.
ದಾಸ ಸಾಹಿತ್ಯ, ವಚನ ಸಾಹಿತ್ಯ, ಸರ್ವಜ್ಞನ ತ್ರಿಪದಿ ಮತ್ತು ಮಂಕುತಿಮ್ಮನ ಕಗ್ಗ, ಕನ್ನಡಿಗರ ಜ್ಞಾನ, ಭಕ್ತಿ ಮತ್ತು ಕರ್ಮ ಸಿದ್ಧಾಂತಗಳನ್ನು ಡಿಂಡಿಮದಂತೆ ಸಾರಿ ಹೇಳುವುದಲ್ಲದೆ, ಇತರ ಭಾಷಿಗರನ್ನು ಅಪ್ಪಿಕೊಂಡಿದೆ.
ಕನ್ನಡಿಗರ ಶಾಂತಿಪ್ರಿಯತೆ, ಕನ್ನಡ ನಾಡು ನುಡಿ, ಸಂಸ್ಕøತಿ ಮತ್ತು ಪರಂಪರೆಯ ಉಳಿವಿಗೆ ಕನ್ನಡದ ಸಾಹಿತ್ಯದ ಮೂಲ ಪುರುಷರೇ ಕಾರಣ ಹಾಗೂ ಅವರ ಕೃತಿಗಳು ಸಾರ್ವಕಾಲಿಕ. ಸದಾ ಕಾಲಕ್ಕೂ ಮಾನವ ಪೀಳಿಗೆಗೆ ದಾರಿದೀಪವಾಗಿದೆ. ಈ ದಿನ ಕನ್ನಡಾಂಬೆಗೆ ನುಡಿ-ನಮನ ಅರ್ಪಿಸಲಾಗುತ್ತಿದೆ ಎಂದು ಸಚಿವ ಸಂತೋಷ ಲಾಡ ಅವರು ನುಡಿದರು.
ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ ನಾಡಿನ ಹೆಸರಾಂತ ಕವಿ, ಸಾಹಿತಿ, ಸಂಗೀತಗಾರರುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಪಂಪ, ಪೊನ್ನ, ರನ್ನ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭು, ಹುಯಿಲಗೋಳ ನಾರಾಯಣರಾಯರು, ಕುವೆಂಪು, ದ.ರಾ.ಬೇಂದ್ರೆ, ಪಾಟೀಲ ಪುಟ್ಟಪ್ಪ, ಚನ್ನವೀರಕಣವಿ, ಎಂ.ಎಂ.ಕಲಬುರ್ಗಿ, ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್, ಬಸವರಾಜರಾಜಗುರು ಇನ್ನೂ ಮುಂತಾದವರ ಕೊಡುಗೆ ಅಪಾರವಾಗಿದೆ ಎಂದು ಅಭಿಮಾನದಿಂದ ಅವರು ನುಡಿದರು.
ಮುಖ್ಯಮಂತ್ರಿಗಳವರ ನೇತೃತ್ವದ ರಾಜ್ಯ ಸರ್ಕಾರವು ನುಡಿದಂತೆ ನಡೆದಿದ್ದು, ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಎಂಬ ಆಶಯದೊಂದಿಗೆ ಜನಕಲ್ಯಾಣ ಯೋಜನೆಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿಯೋಜನೆ, ಅನ್ನಭಾಗ್ಯಯೋಜನೆ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 29.47 ಕೋಟಿ ಮಹಿಳೆಯರು ಉಪಯೋಗ ಪಡೆದಿದ್ದು, ರೂ.631.95 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3,95,310 ಮಹಿಳೆಯರಿಗೆ ರೂ.1,584.90 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 5,70,003 ಕುಟುಂಬಗಳಿಗೆ ರೂ.517.53 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 3,62,516 ಕುಟುಂಬಗಳಿಗೆ ರೂ.358.28 ಕೋಟಿಗಳನ್ನು ವಿತರಿಸಲಾಗಿದೆ. ಯುವನಿಧಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 7920 ಫಲಾನುಭವಿಗಳಿಗೆ ನೇರ ನಗದು (ಡಿಬಿಟಿ) ರೂ.19.95 ಕೋಟಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವವು ನಮ್ಮ ಬೇರುಗಳನ್ನು ನೆನಪಿಸಿಕೊಳ್ಳುವ ಮತ್ತು ನಮ್ಮ ರಾಜ್ಯದ ಸಾಧನೆಗಳನ್ನು, ಗೌರವಿಸುವ ಸಂದರ್ಭವಾಗಿದೆ. ಭಾಷೆ, ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ, ಸಮೃದ್ಧಿಯಲ್ಲಿ ಮುಂದುವರಿಯುತ್ತಿರುವ ನವ ಕರ್ನಾಟಕವನ್ನು ನಿರ್ಮಿಸಲು ನಾವೆಲ್ಲರೂ ಪಣತೊಡೋಣ.
ಪ್ರಗತಿ ಮತ್ತು ನಾವೀನ್ಯತೆಗೆ ಬದ್ಧತೆಯನ್ನು ತೋರಿಸುವ ಸಂಕಲ್ಪವನ್ನು ಮಾಡುತ್ತಾ, ಈ ಸಂತಸದ ಸಂದರ್ಭದಲ್ಲಿ ನಮ್ಮ ನಾಡು ನುಡಿಯ ಪ್ರೀತಿ ಕೇವಲ ನವ್ಹೆಂಬರ್ ತಿಂಗಳಿಗೆ ಸೀಮಿತವಾಗದೆ. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರವನ್ನು ಕನ್ನಡದಲ್ಲೇ ಮಾಡುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ ಎಂದು ನಾವೆಲ್ಲರೂ ಪಣತೊಡೋಣ ಎಂದು ಸಚಿವರು ತಿಳಿಸಿದರು.
ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಾರದ ನಮ್ಮ ಜಿಲ್ಲೆಯವರಾದ ಶಿಕ್ಷಣ ತಜ್ಞ ಹಾಗೂ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ .ರವೀಂದ್ರ ಕೋರಿಶೆಟರ, ಚಿತ್ರಕಲಾವಿದ ಬಿ.ಮಾರುತಿ ಅವರಿಗೆ ಜಿಲ್ಲೆಯ ಪರವಾಗಿ ಅಭಿನಂದನೆಗಳನ್ನು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತ ಸದಸ್ಯ ಎಫ್.ಎಚ್.ಜಕ್ಕಪ್ಪನವರ, ಕರ್ನಾಟಕ ಬಾಲವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪೋಲಿಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಗುಂಜನ ಆರ್ಯ, ಐಎಎಸ್ ಪ್ರೊಬೇಷನರಿ ಅಧಿಕಾರಿ ರೀತಿಕಾ ವರ್ಮಾ, ಅಪರ ಜಿಲ್ಲಾಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶಿಲ್ದಾರ ಡಾ.ಡಿ.ಎಚ್.ಹೂಗಾರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಪಥ ಸಂಚಲನ ಕಾರ್ಯಕ್ರಮ : ಜಿಲ್ಲಾ ಶಸಸ್ತ್ರ ಮೀಸಲು ಪಡೆ ತುಕಡಿಯ ನಾಯಕ ವಾಸು ರಕ್ಷೇದ, ನಾಗರಿಕ ಪೋಲಿಸ್ ತುಕಡಿಯ ನಾಯಕ ಅಭಿಜೀತ, ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತರ ಮಹಿಳಾ ತಂಡದ ತುಕಡಿಯ ನಾಯಕಿ ಸವಿತಾ, ಗೃಹರಕ್ಷಕ ದಳ ತುಕಡಿಯ ನಾಯಕ ರಾಚಯ್ಯ ಅಮರಪನಮಠ, ಅಗ್ನಿಶಾಮಕ ಇಲಾಖೆಯ ತುಕಡಿಯ ನಾಯಕ ಸುಭಾಸ.ಪಿ.ನಡುಗೇರಿ, ಅರಣ್ಯ ಇಲಾಖೆ ತುಕಡಿಯ ನಾಯಕ ವಿಷ್ಣು ಚವ್ಹಾನ, ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ 1 ನೇ ತಂಡದ ತುಕಡಿಯ ನಾಯಕಿ ಲಕ್ಷ್ಮಿ ಕಾಂಬ್ಳೆ, ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ 2 ನೇ ತಂಡದ ತುಕಡಿಯ ನಾಯಕಿ ಅನ್ನಪೂರ್ಣೇಶ್ವರಿ, ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ 3ನೇ ತಂಡದ ತುಕಡಿಯ ನಾಯಕಿ ಕಾದಂಬರಿ ಕಾಂಬ್ಳೆ, ಸೀನಿಯರ್ ಎನ್.ಸಿ.ಸಿ. 24 ಬಟಾಲಿಯನ್ ತುಕಡಿಯ ನಾಯಕ ನಯಿಮ್ ನದಾಫ್, ಜೂನಿಯರ್ ಎನ್‍ಸಿಸಿ 24 ಬಟಾಲಿಯನ್ ತುಕಡಿಯ ನಾಯಕ ತುಕಾರಾಮ್ ಲಾಂಬೋರ, ಜೂನಿಯರ್ ಗಲ್ರ್ಸ್ ಎನ್‍ಸಿಸಿ 24 ಬಟಾಲಿಯನ್ ತುಕಡಿಯ ನಾಯಕಿ ಸಾದಿಯಾ ಬಿಜಾಪೂರ, ವಿದ್ಯಾರಣ್ಯ ಹೈಸ್ಕೂಲ್ ತುಕಡಿಯ ನಾಯಕ ಅಫಿಪ್ ಅಹಮ್ಮದ ತಂಬೊಲಿ,ಆದರ್ಶ ಹೈಸ್ಕೂಲ್ ತುಕಡಿಯ ನಾಯಕ ನಾಗರಾಜ ಮಡಿವಾಳರ, ಪ್ರಸೆಂಟೇಷನ್ ಗಲ್ರ್ಸ ಹೈಸ್ಕೂಲ್ ತುಕಡಿಯ ನಾಯಕಿ ಸಹನಾ ಮುನವಳ್ಳಿ,ಸೆಂಟ್ ಜೋಸೆಪ್ಸ್ ಹೈಸ್ಕೂಲ್ ತುಕಡಿಯ ನಾಯಕ ಮಲ್ಲಿಕಾರ್ಜುನ ಬಂಕಾಪೂರ, ಕೆ.ಎನ್.ಕೆ.ಬಾಲಕೀಯರ ಪ್ರೌಢಶಾಲೆ ತುಕಡಿಯ ನಾಯಕಿ ನಿಖಿತಾ ಗೌಳಿ, ಶ್ರೀ ಎನ್.ಎ.ಮುತ್ತಣ್ಣ ಸ್ಮಾಕರ ಪೊಲೀಸ್ ಮಕ್ಕಳ ವಸತಿ ಶಾಲೆ ತುಕಡಿಯ ನಾಯಕ ಹರೀಶ ರಾಠೋಡ ಅವರು ಪಥ ಸಂಚಲನ ನಡೆಸಿದರು.
ಪಥ ಸಂಚಲನ ವಿಜೇತರು: ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಎನ್.ಎ.ಮುತ್ತಣ್ಣ ಸ್ಮಾರಕ ಪೂಲೀಸ್ ಮಕ್ಕಳ ವಸತಿ ಶಾಲೆ, ದ್ವಿತೀಯ ಸ್ಥಾನ ಸೀನಿಯರ್ ಎನ್.ಸಿ.ಸಿ 24 ಬಟಾಲಿಯನ್, ತೃತೀಯ ಸ್ಥಾನ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ಎರಡನೇ ತಂಡ ಪಡೆದುಕೊಂಡಿತು.
ಸಾಂಸ್ಕøತಿಕ ಕಾರ್ಯಕ್ರಮ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ನಿಲಯದ ವಿದ್ಯಾರ್ಥಿನಿಯರ ಕಲಾತಂಡ, ಶಾಲಾ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿದ್ದಲ್ಲಿ ತೆರಳಿ ರಾಜ್ಯೋತ್ಸವ ಶುಭಾಶಯ ಕೋರಿದ ಸಚಿವರು: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಂದು ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಇದ್ದ ಸ್ಥಳಗಳಿಗೆ ತೆರಳಿ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದರು.

ತಾಂತ್ರಿಕ ಕಾರಣದಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚನೆ: ಪರಿಶೀಲಿಸಿ, ಕ್ರಮ : ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಅಡಚನೆ ಉಂಟಾಗಿತ್ತು. ಇದರಿಂದ ಸುಲಲಿತ ಕಾರ್ಯಕ್ರಮಕ್ಕೆ ತೊಂದರೆ ಉಂಟಾಗಿತ್ತು.
ಒಂದು ತಿಂಗಳ ಮೊದಲೇ ಪೂರ್ವಭಾವಿ ಸಭೆ ಜರುಗಿಸಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಕಾರ್ಯಕ್ರಮ ವೇದಿಕೆ ಅಲಂಕಾರ ಹಾಗೂ ಕಾರ್ಯಕ್ರಮದಲ್ಲಿ ಧ್ವನಿವರ್ಧಕ, ವೇದಿಕೆ ಸಿದ್ದತೆ ಜವಾಬ್ದಾರಿ ನೀಡಲಾಗಿತ್ತು. ಆದರೂ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಪೂರೈಕೆ ಸಮಸ್ಯೆಯಾಗಿ ಕಾರ್ಯಕ್ರಮದಲ್ಲಿ ತೊಂದರೆ ಆಗಿದ್ದು, ಪರಿಶೀಲಿಸಿ ಸಂಬಂಧಿಸಿದ ಪಾಲಿಕೆ ಅಧಿಕಾರಿ ಮತ್ತು ಅಭಿಯಂತರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

About The Author