ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಉತ್ತರ ಕರ್ನಾಟಕದ ಧರ್ಮಸ್ಥಳದ ಎಂಬ ಖ್ಯಾತಿ ಹೊಂದಿರುವ ಗೊಡಚಿ ಕ್ಷೇತ್ರದ ಶ್ರೀ ವೀರಭದ್ರೇಶ್ವರ ರಥೋತ್ಸವವು ಡಿ.4 ರಂದು ಹೊಸ್ತಿಲ ಹುಣ್ಣಿಮೆ ದಿನ ಸಂಜೆ 5-00 ಗಂಟೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಪ್ರತಿವರ್ಷ ಜಾತ್ರೆಯ ಪ್ರಾರಂಭದ ಅಂಗವಾಗಿ ಬುಧವಾರ ದಿನಾಂಕ 26-11-2025 ರಂದು ಗೊಡಚಿ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ವೀರಗಾಸೆ ವೀರಪುರವಂತರ ಸಮೇತವಾಗಿ ಪಲ್ಲಕ್ಕಿ ಉತ್ಸವವು ತೊರಗಲ್ ಶ್ರೀ ಭೂತನಾಥ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಜಾತ್ರೆಯ ಕಾರ್ಯಕ್ರಮಗಳನ್ನು ಮುಗಿಸಿ ಗುರುವಾರ ದಿನಾಂಕ 27-11-2025 ರಂದು ಸಾಯಂಕಾಲ ಮರಳಿ ಶ್ರೀ ಕ್ಷೇತ್ರ ಗೊಡಚಿಗೆ ಬಂದು ರವಿವಾರ ದಿನಾಂಕ 30-11-2025 ರವರೆಗೆ ಪಲ್ಲಕ್ಕಿ ಉತ್ಸವ ಜರುಗುವದು. ಸೋಮವಾರ ದಿನಾಂಕ 01-12-2025 ರಿಂದ ಬುಧವಾರ ದಿನಾಂಕ 03-12-2025 ರವರೆಗೆ ಸಾಯಂಕಾಲ ಹೃಚ್ಚಾಯ (ಸಣ್ಣತೇರು) ಉತ್ಸವ ಜರುಗುವದು. ಗುರುವಾರ ದಿನಾಂಕ 04-12-2025 ರಂದು ಮಧ್ಯರಾತ್ರಿ 12 ಗಂಟೆ 5 ನಿಮಿಷಕ್ಕೆ 11 ಜನ ಶಾಸ್ತ್ರಿಗಳಿಂದ ಶ್ರೀ ವೀರಭದ್ರಸ್ವಾಮಿಯ ಹಾಗೂ ಶ್ರೀ ಭದ್ರಕಾಳಿ ಮಾತೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಮ್ಮನವರಿಗೆ ಕುಂಕುಮಾರ್ಚನೆ ಆದಬಳಿಕ ಮಹಾಮಂಗಳಾರತಿ ಜರುಗುವದು. ಸಾಯಂಕಾಲ 5-00 ಗಂಟೆಗೆ “ಮಹಾರಥೋತ್ಸವ” ಅತೀ ವಿಜೃಂಭಣೆಯಿಂದ ಜರುಗುವದು. ಸೋಮವಾರ ದಿನಾಂಕ 08-12-2025 ರಂದು ಸಾಯಂಕಾಲ 6-00 ಗಂಟೆಗೆ ಲಕ್ಷದೀಪೋತ್ಸವ ಜರುಗುವದು.
ಕಲಿಯುಗದಲ್ಲಿಯೂ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಬಲ್ಲ ದೈವಾದಿ ಪುರಷನಾಗಿ ಪ್ರಸಿದ್ದಿ ಪಡೆದು ಭಕ್ತರ ಮನದಲ್ಲಿ ಮನೆ ಮಾಡಿರುವ ವೀರಭದ್ರನ ಜಾತ್ರೆ ಈ ಭಾಗದಲ್ಲಿಯೇ ಖ್ಯಾತಿ ಪಡೆದಿದೆ. ಗೊಡಚಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಿರಂತರ ಅನ್ನದಾಸೋಹ ನಡೆಸುತ್ತ ಉತ್ತರ ಕರ್ನಾಟಕದ ಧರ್ಮಸ್ಥಳ ಎಂಬ ಹೆಗ್ಗಳಿಕೆಗೆ ಈ ದೇವಸ್ಥಾನವು ಪಾತ್ರವಾಗಿದೆ.

ರಾಮದುರ್ಗ ಮತ್ತು ತೊರಗಲ್ ಗ್ರಾಮಗಳು ರಾಜಮನೆತನ ಪರಂಪರೆಯನ್ನು ಹೊಂದಿವೆ. ಪ್ರಾಚೀನ ಸಂಸ್ಥಾನಿಕರ ಕಾಲದಲ್ಲಿ ಗೊಡಚಿ ಕ್ಷೇತ್ರವು ತೊರಗಲ್ದ ಶಿಂಧೆ ಮನೆತನದ ಒಡೆತನಕ್ಕೆ ಸೇರಿತ್ತು. ಶಿಂಧೆ ಮನೆತನವು ಮೂಲತಃ ಮರಾಠಿ ಸಂಸ್ಥಾನಿಕರಿಗೆ ಸೇರಿದ್ದರೂ ಈ ಭಾಗದಲ್ಲಿ ಹೆಚ್ಚಾಗಿರುವ ಲಿಂಗಾಯತ ಸಮುದಾಯದವರ ಕುಲದೇವರು ಎನಿಸಿಕೊಂಡಿರುವ ವೀರಭದ್ರ ದೇವರಿಗೂ ಸಾಕಷ್ಟು ಮಹತ್ವ ನೀಡಿ ದೇವಸ್ಥಾನದ ಉನ್ನತಿಗಾಗಿ ಶ್ರಮಿಸಿದ್ದಾರೆ. ಇಂದಿಗೂ ಈ ಕ್ಷೇತ್ರದ ಅಭಿವೃದ್ದಿ ಮತ್ತು ಜಾತ್ರೆಯ ಜವಾಬ್ದಾರಿಯನ್ನು ಶಿಂಧೆ ಮನೆತನದವರೇ ಹೆಚ್ಚಾಗಿ ನೋಡಿಕೊಳ್ಳುತ್ತಾರೆ.
ಗೊಡಚಿ ಜಾತ್ರೆಯ ಅಭಿವೃದ್ಧಿಗಾಗಿ ರಚನೆಗೊಂಡಿರುವ ಜಾತ್ರಾ ಕಮಿಟಿ ಮತ್ತು ಗೊಡಚಿ ಗ್ರಾಮ ಪಂಚಾಯ್ತಿ ಭಕ್ತರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ನಿರ್ಮಿಸಿಕೊಟ್ಟಿವೆ. ಗೊಡಚಿ ದೇವಸ್ಥಾನದ ಸುತ್ತಲೂ ವಸತಿಗೃಹಗಳು, ಕಲ್ಯಾಣ ಮಂಟಪಗಳು, ಸುಲಭ ಶೌಚಾಲಯಗಳು, ಸಾಲಾಗಿ ನಿರ್ಮಿಸಿದ ವ್ಯಾಪಾರಿ ಮಳಿಗೆಗಳು ಭಕ್ತರಿಗೆ ಅನುಕೂಲವಾಗಿವೆ. ಜಾತ್ರೆಯ ಸಮಯಕ್ಕೆ ಅಚ್ಚುಕಟ್ಟಾಗಿ ನಿರ್ಮಿಸಿದ ತಾತ್ಕಾಲಿಕ ವ್ಯಾಪಾರಿ ಮಳಿಗೆಗಳು ಭಕ್ತರ ತೊಂದರೆಗಳನ್ನು ನೀಗಿಸಬಲ್ಲವು. ಜಾತ್ರೆ ದಿನ ಭಕ್ತರಿಗೆ ಸಿಹಿ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ಗೊಡಚಿ ಗ್ರಾಮದ ಸುತ್ತಲಿನ ಭಕ್ತರು ಚಕ್ಕಡಿ, ಟ್ರ್ಯಾಕ್ಟರ್, ಟಂಟಂ, ಬೈಸಿಕಲ್, ಟ್ರಕ್ಗಳಲ್ಲಿ ಆಗಮಿಸಿ ದೇವಸ್ಥಾನದ ಮುಂದಿನ ವಿಶಾಲವಾದ ಬಯಲಿನಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೇ ಟೆಂಟ್ ಹಾಕಿಕೊಂಡು ಐದು ದಿನಗಳ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದಲ್ಲದೇ ದೂರದ ಜಿಲ್ಲೆಗಳು ಸೇರಿದಂತೆ ಪಕ್ಕದ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಜಾತ್ರೆ ಮಾಡುತ್ತಾರೆ.
ಪ್ರತಿ ಜಾತ್ರೆಗಳಲ್ಲಿ ಒಂದಿಲ್ಲ ಒಂದು ವಿಶೇಷತೆ ಇರುವುದು ಸಹಜ. ಇಲ್ಲಿ ಮಾತ್ರ ಬಳವೊಲು ಹಣ್ಣಿನ ವಿಶೇಷತೆ ಜಾತ್ರೆಯ ಖ್ಯಾತಿ ಇಮ್ಮಡಿಗೊಳಿಸಿದೆ. ಬಳವೊಲು ಹಣ್ಣಿನ ಜೊತೆಗೆ ಬೋರೆ ಬಾಳೆ ಹಣ್ಣಿನ ವ್ಯಾಪಾರವೂ ಜೋರಾಗಿಯೇ ನಡೆಯುತ್ತದೆ. ಬಳವೊಲು ಹಣ್ಣಿನ ವಿಶೇಷತೆ ಜಾತ್ರೆಗೆ ಬರುವ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಜಾತ್ರೆಗೆ ಬರುವ ಪ್ರತಿಯೊಬ್ಬರು ಬಳವೊಲು ಹಣ್ಣಿನ ಖರೀದಿಗೆ ಪ್ರಾಮುಖ್ಯತೆ ನೀಡುತ್ತಾರೆ.



