ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಾದ ಡಿಜಿಟಲ್ ಇಂಡಿಯಾಗೆ ನಾವೆಲ್ಲರೂ ವರ್ಗಾವಣೆ ಆಗಬೇಕು. ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಡಿಜಿಟಲ್ ಇಂಡಿಯಾ ತೊಡಗಿಸಿಕೊಂಡಾಗ ಮಾತ್ರ ಅದರ ಕನಸು ನನಸಾಗುತ್ತದೆ ಎಂದು ಭಾರತ ಸರ್ಕಾರದ ಪಿಂಚಣಿ ಇಲಾಖೆಯ ಅಧೀನ ಕಾರ್ಯದರ್ಶಿ ದೀಪಕ ಗುಪ್ತ ಅವರು ಹೇಳಿದರು.
ಧಾರವಾಡ ನಗರದ ಭಾರತೀಯ ಸ್ಟೇಟ್ ಬ್ಯಾಂಕನ ಮುಖ್ಯಶಾಖೆಯಲ್ಲಿ ನಿವೃತ್ತಿ ವೇತನ ಪಡೆಯುತ್ತಿರುವ ನಿವೃತ್ತಿದಾರರಿಗೆ ಕೇಂದ್ರ ಸರಕಾರ ಒದಗಿಸಿರುವ ನೂತನ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಪ್ರಸ್ತುತ ನಾವು ಯಾವ ಸ್ಥಳದಲ್ಲಾದರೂ ಕೂಳಿತುಕೊಂಡು ರೈಲ್ವೆ ಟಿಕೆಟ್ ಬುಕ್ ಮಾಡುತ್ತೇವೆ, ಹಣ ವರ್ಗಾವಣೆಯನ್ನು ಮಾಡುತ್ತೇವೆ, ಹಾಗೂ ಇತರೆ ಆನ್‍ಲೈನ್ ವ್ಯವಹಾರಗಳನ್ನು ಮಾಡುತ್ತೇವೆ. ಅದೇ ರೀತಿ ಕೇಂದ್ರ ಸರ್ಕಾರವು ಡಿಜಿಟಲ್ ಲೈಫ್ ಸರ್ಟಿಫಿಕೇಟ್‍ನ್ನು ಸಲ್ಲಿಸಬಹುದಾದ ಅವಕಾಶವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.
ಒಬ್ಬಂಟಿಯಾಗಿ ಇರುವವರಿಗೆ, ಅನಾರೋಗ್ಯದಿಂದ ಬಳಲುವವರಿಗೆ ಮತ್ತು ಇತರ ಸಮಸ್ಯೆ ಇರುವ ಹಲವಾರು ಜನರಿಗೆ ಕೆಲವು ಸಮಯದಲ್ಲಿ ಬ್ಯಾಂಕ್‍ಗಳಿಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಅವರೆಲ್ಲರೂ ಮನೆಯಲ್ಲಿಯೇ ಕೂತುಕೊಂಡು ಫೆÇೀನ್ ಮುಖಾಂತರ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು ಅಥವಾ ಯಾರಾದರೂ ಒಬ್ಬರ ಸಹಾಯವನ್ನು ತೆಗೆದುಕೊಂಡು ಸಲ್ಲಿಸಬಹುದು ಎಂದುಅವರು ಹೇಳಿದರು.
ಪಿಂಚಣಿ ಇಲಾಖೆಯ ಹಿರಿಯ ಅಧಿಕಾರಿ ಉಮೇಶ ಪ್ರಸಾದ ಶಾ ಅವರು ಮಾತನಾಡಿ, 2 ಲಕ್ಷ 20 ಸಾವಿರ ಜನ ಪಿಂಚಣಿದಾರರನ್ನು ಈ ವರ್ಷ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಹೊಸ ಅಭಿಯಾನದಲ್ಲಿ ತೆಗೆದುಕೊಂಡು ಬರುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಪಿಂಚಣಿದಾರರಿಗೆ ನಾವು ನೀಡುತ್ತಿರುವ ಈ ಸೇವೆ ಸಂಪೂರ್ಣವಾಗಿ ಸುಲಭ, ವೇಗವಾದ ಮತ್ತು ತೊಂದರೆ ರಹಿತವಾಗಿರಬೇಕು ಎಂಬುದು ನಮ್ಮ ಆಶಯ. ಹಿರಿಯ ನಾಗರಿಕರು ಬ್ಯಾಂಕ್‍ಗೆ ಓಡಾಟ ಮಾಡಬೇಕಾದ ಅವಶ್ಯಕತೆ ಇಲ್ಲದಂತೆ, ಮನೆಯಲ್ಲಿಯೇ ಅಥವಾ ಸಮೀಪದ ಕೇಂದ್ರದಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನೀಡುವ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕಿ ಸುಮಾ ಜಿ. ಕೆ. ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಧಾರವಾಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೇನ್ ಬ್ರ್ಯಾಂಚ್‍ದ ಮುಖ್ಯ ವ್ಯವಸ್ಥಾಪಕ ರೂಪೇಶ ಮಿಶ್ರಾ ಅವರು, ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿದರು. ವಿದ್ಯಾಸಾಗರ ದೀಕ್ಷಿತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪಿಂಚಣಿದಾರರು, ಸಾರ್ವಜನಿಕರು ಭಾಗವಹಿಸಿದ್ದರು.



