ಹಸು ಮಾರಿ ₹32,340 ಶುಲ್ಕ ಪಾವತಿ I 16,370 ಪುಟ ಸಂಗ್ರಹ ಎತ್ತಿನ ಬಂಡಿಯಲ್ಲಿ ಆರ್‌ಟಿಐ ದಾಖಲೆ!

WhatsApp Group Join Now

ಅರಕಲಗೂಡು ತಾಲೂಕಿನ ಬಸವನಹಳ್ಳಿ ಕೊಪ್ಪಲು ಗ್ರಾಮದ ವ್ಯಕ್ತಿಯೊಬ್ಬ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಕಡತಗಳನ್ನು ಎತ್ತಿನ ಬಂಡಿ ಯಲ್ಲಿ ತುಂಬಿಕೊಂಡು ಕೊಂಡೊಯ್ದ ಅಪರೂಪದ ಪ್ರಸಂಗ ಬುಧವಾರ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಬಸವನಹಳ್ಳಿ ಕೊಪ್ಪಲಿನ ಬಿ.ಎಸ್.ರವಿ ಕಾಳೇನಹಳ್ಳಿ ಗ್ರಾಮ ಪಂಚಾಯತಿಯಿಂದ 2020ರಿಂದ 2025ರ ವರೆಗೆ 15ನೇ ಹಣಕಾಸು ಯೋಜನೆಯಡಿ ನಡೆದಿರುವ ಕಾಮಗಾರಿಗಳ ಕ್ರಿಯಾ ಯೋಜನೆ ಪಟ್ಟಿ, ಜಿಪಿಎಸ್ ಸಹಿತ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಪಿಡಿಒ ನೋಟಿಸ್‌ ನೀಡಿ, ಬೇಕಾದ ದಾಖಲೆಗಳನ್ನು ಪಡೆದುಕೊಳ್ಳಲು ಕಡತ ಪರಿಶೀಲಿಸುವಂತೆ ತಿಳಿಸಿದ್ದರು. ಅರ್ಜಿದಾರ ಬಯಸಿದ ದಾಖಲೆಗಳು 16,370 ಪುಟಗಳು ಇದ್ದುದ್ದರಿಂದ ಪ್ರತಿ ಕಾಪಿಗೆ 2 ರೂ.ನಂತೆ 32,340 ರೂ. ಶುಲ್ಕವನ್ನು ಡಿಡಿ ಮೂಲಕ ಪಾವತಿಸುವಂತೆ ಸೂಚಿಸಿದ್ದರು. ರವಿ ಶುಲ್ಕ ಪಾವತಿಸಿದ್ದು, 16,370 ಪ್ರತಿಗಳನ್ನು ಅಂಚೆ ಮೂಲಕ ಪಿಡಿಒ ಒದಗಿಸಿದ್ದರು. ಆ ಬೃಹತ್ ದಾಖಲೆಗಳನ್ನು ರವಿ ತಮ್ಮ ಎತ್ತಿನಗಾಡಿಯಲ್ಲಿ ತುಂಬಿ ಕೊಂಡು ಮನೆಗೆ ತಂದಿದ್ದಾರೆ. ಶುಲ್ಕ ಭರಿಸಲು ಮನೆಯಲ್ಲಿದ್ದ ಒಂದು ಹಸುವನ್ನು ಮಾರಾಟ ಮಾಡಿ 25 ಸಾವಿರ ರೂ. ಹಾಗೂ ಉಳಿಕೆ ಹಣವನ್ನು ಸ್ನೇಹಿತರಿಂದ ಸಾಲವಾಗಿ ಪಡೆದಿದ್ದಾರೆ.

ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿ ಬಸವನಹಳ್ಳಿ ಕೊಪ್ಪಲು ರೈತ ಬಿ.ಎಸ್. ರವಿ ಎತ್ತಿನ ಬಂಡಿ ತಂದು ಕಡತಗಳನ್ನು ತುಂಬಿಕೊಳ್ಳುತ್ತಿರುವುದು.

ಆ ದಾಖಲೆಗಳನ್ನು ತಾವು ಕೂಲಂಕಷವಾಗಿ ಪರಿಶೀಲಿಸಲಿಸಿ, ಯಾವುದಾದರೂ ಅಕ್ರಮ ಕಂಡು ಬಂದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ. ನಾನು ದಾಖಲೆ ಕೋರಿ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಹಿಂಪಡೆಯುವಂತೆ ಆಮಿಷ ಒಡ್ಡಲಾಗಿದೆ. ನಾವು ಏನಾದರೂ ದಾಖಲೆ ಕೇಳಿಕೊಂಡು ಕಚೇರಿಗಳಿಗೆ ಹೋದರೆ ಇಲ್ಲದ ನಿಯಮ ಪ್ರಸ್ತಾಪಿಸಿ ಅಲೆದಾಡಿಸುತ್ತಾರೆ. ಜನರಿಗೆ ತೊಂದರೆ ನೀಡುವವರು ಎಲ್ಲ ನಿಯಮ ಪಾಲಿಸಿದ್ದಾರೆಯೇ ಎನ್ನುವುದನ್ನು ಅರಿಯಲು ಈ ದಾಖಲೆಗಳನ್ನು ಪಡೆದುಕೊಂಡಿದ್ದೇನೆ ಎಂದು ರವಿ ಹೇಳಿದ್ದಾರೆ.

About The Author