ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 2% ರಂತೆ ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ದಸಂಸ ಪ್ರತಿಭಟನೆ

 ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 2% ರಂತೆ ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ  ದಿನಾಂಕ : 09-12-2025 ರ ಮಂಗಳವಾರ ಮೈಸೂರಿನ ಟೌನ್ ಹಾಲ್ ಮುಂಭಾಗದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಯ ಹತ್ತಿರ ದಸಂಸದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. 
WhatsApp Group Join Now

ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಸಂಚಾಲಕರಾದ ತರಿಕೆರೆ ವೆಂಕಟೇಶ್ ರವರು ಮಾತನಾಡಿ ಪರಿಶಿಷ್ಟ ಅಲೆಮಾರಿ ಸಮುದಾಯಗಳಾದ ಸಿಳ್ಳೆಕ್ಯಾತ, ಕೋಲೆಬಸವ, ಹಂದಿಜೋಗಿ, ದೊಂಬರ, ಸುಡುಗಾಡು ಸಿದ್ಧ, ಚನ್ನದಾಸ, ಕೊರಮ, ಕೊರಚ ಮುಂತಾದ ನಿರ್ಗತಿಕ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುಂಪು ಮಾಡಿ ಶೇ. 2% ರಷ್ಟಾದರೂ ಮೀಸಲಾತಿಯನ್ನು ಕೊಡಬೇಕಾಗಿತ್ತು. ಏಕೆಂದರೆ ಈ ಅಲೆಮಾರಿ ಸಮುದಾಯಗಳು ಹುಟ್ಟು ಸಾವುಗಳಿಗೆ ದಾಖಲೆಗಳೇ ಇಲ್ಲದೆ ಮರದ ಕೆಳಗೆ, ಪಾಳುಮಂಪಟಗಳಲ್ಲಿ ನೆಲೆಗಳೇ ಇಲ್ಲದೆ ಬೀದಿಯಲ್ಲಿ ಬದುಕನ್ನು ದೂಡುವ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಈ ಅಲೆಮಾರಿ ಸಮುದಾಯಗಳು ಕನಿಷ್ಟ ವಿದ್ಯಾಭ್ಯಾಸವನ್ನು ಮಾಡಿಲ್ಲ. ಸರ್ಕಾರದ ಕನಿಷ್ಟ ಸೌಲಭ್ಯಗಳನ್ನು ಇಂದಿಗೂ ಪಡೆಯಲಾಗುತ್ತಿಲ್ಲ. ಇವರ ಹಕ್ಕು ಬಾಧ್ಯತೆಗಳ ಬಗ್ಗೆನೆ ಇವರಿಗೆ ಅರಿವಿಲ್ಲ. ಪ್ರಾಣಿ ಪಕ್ಷಿಗಳ ರೀತಿ ಬದುಕನ್ನು ದೂಡುತ್ತಿದ್ದಾರೆ. ಇಂತಹ ದಿಕ್ಕು ದನಿಯಿಲ್ಲದ ಅಲೆಮಾರಿ ಸಮುದಾಯಗಳು ಇತರೆ ಸಮುದಾಯಗಳ ಜೊತೆ ಸರ್ಕಾದಿಂದ ಸವಲತ್ತುಗಳನ್ನು ಪಡೆಯುವಾಗ ಪೈಪೋಟಿ ಕೊಡಲು ಸಾಧ್ಯವಾಗುವುದಿಲ್ಲ ಎಂದರು.

ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ  ಮೈಸೂರು ಜಿಲ್ಲಾ ದಸಂಸವು ಕಳೆದ 30 ವರ್ಷಗಳಿಂದ ಪರಿಶಿಷ್ಟ ಉಪಜಾತಿಗಳಿಗೆ ಒಳಮೀಸಲಾತಿಯನ್ನು  ಕೊಡಬೇಕೆಂದು ನಿರಂತರ ಹೋರಾಟ ಮಾಡುತ್ತಾ ಬಂದ ಪರಿಣಾಮವಾಗಿ ಸರ್ಕಾರ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವನ್ನು ರಚನೆ ಮಾಡಿ ಅದರ ಆಧಾರದ ಮೇಲೆ ಒಳಮೀಸಲಾತಿಯನ್ನು ಜಾರಿಗೆ ತರುವಾಗ ಇಂತಹ ಸೂಕ್ಷ್ಮ ಸಮಸ್ಯೆಗಳನ್ನು ಪರಿಗಣಿಸಬೇಕಾಗಿತ್ತು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಹೊಂದಿರುವ ಮುಖ್ಯಮಂತ್ರಿ  ಸಿದ್ಧರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವರಾದ ಹೆಚ್. ಸಿ. ಮಹದೇವಪ್ಪ ರವರಿಗೆ ಇಂತಹ ನಿರ್ಗತಿಕ ಅಲೆಮಾರಿ ಸಮುದಾಯಗಳ ಬದುಕು ಭವಣೆಗಳ ಬಗ್ಗೆ ಅರಿವಿರಬೇಕಿತ್ತು. ಆದರೆ ಈ ಸಮುದಾಯಗಳಿಗೆ ಪ್ರತ್ಯೇಕವಾಗಿ ಗುಂಪು ಮಾಡಿ ಒಳಮೀಸಲಾತಿ ಕೊಡದೇ ಇರುವುದು ಅವರ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು. ಕೂಡಲೇ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಪ್ರತ್ಯೇಕ ಗುಂಪು ಮಾಡಿ  ಒಳಮೀಸಲಾತಿಯನ್ನು ಶೇ. 2 ರಷ್ಟಾದರೂ ಮೀಸಲಿಡಬೇಕು. ಸರ್ಕಾರ ಈ ತೀರ್ಮಾನವನ್ನು ಕೈಗೊಳ್ಳದಿದ್ದರೆ ಮುಂದೊಂದು ದಿನ ಈ ನಿರ್ಗತಿಕ ಅಲೆಮಾರಿ ಸಮುದಾಯಗಳೇ ಸರ್ಕಾರದಲ್ಲಿ ಯಾವುದೇ ಭಾಗೀದಾರರಾಗದೆ ಮೂಲಭೂತ ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗಿ ಪ್ರಾಣಿ ಪಕ್ಷಿಗಳ ರೀತಿ ಬೀದಿ ಬೀದಿಗಳಲ್ಲಿ ನಾವುಗಳು ನೋಡುವ ಸ್ಥಿತಿ ಎದುರಾಗಲಿದೆ. ಕೊನೆಗೊಮ್ಮೆ ಈ ದಿಕ್ಕು ದನಿಯಿಲ್ಲದ ಈ ನಿರ್ಗತಿಕ ಅಲೆಮಾರಿ ಕುಟುಂಬಗಳ ನೋವು ಇಡೀ ಸಮಾಜವನ್ನೇ ಶಪಿಸಬಹುದು ಎಂದರು. 

ಈ ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಕೆ. ನಂಜಪ್ಪ ಬಸವನಗುಡಿ, ರಾಜಶೇಖರ್ ಜಾಪನೂರು, ರಾಜ್ಯ ಮಹಿಳಾ ಸಂಚಾಲಕರಾದ ಭವಾನಿ, ಬೆಂಗಳೂರು ಮಹಿಳಾ ಸಂಚಾಲಕರಾದ ಭಾರತಿ, ವಿಭಾಗೀಯ ಸಂಚಾಲಕರಾದ ಸಿ.ಎಸ್ ಜಗದೀಶ್, ಮೈಸೂರು ಜಿಲ್ಲಾ ಸಂಚಾಲಕರಾದ ಹೆಚ್.ಬಿ. ದಿವಾಕರ್, ಮೈಸೂರು ನಗರ ಸಂಚಾಲಕರಾದ ಪೈಲ್ವಾನ್ ಕೃಷ್ಣ, ಜಿಲ್ಲಾ ಕಲಾಮಂಡಳಿಯ ಕಿರಿಜಾಜಿ ಗಜೇಂದ್ರ, ಹುಣಸೂರು ತಾಲ್ಲೂಕು ಸಂಚಾಲಕರಾದ ಬಲ್ಲೇನಹಳ್ಳಿ ಕೆಂಪರಾಜು, ಪಿರಿಯಾಪಟ್ಟಣ ತಾಲ್ಲೂಕು ಸಂಚಾಲಕ ಮಲ್ಲಿಜಾರ್ಜುನ, ಕೆ.ಆರ್. ನಗರ ಸಂಚಾಲಕರಾದ ಮಂಜು, ಸಾಲಿಗ್ರಾಮ ಸಂಚಾಲಕರಾದ ಲೋಕೇಶ್, ಹೆಚ್.ಡಿ ಕೋಟೆ ಸಂಚಾಲಕರಾದ ಚೆನ್ನ, ಸರಗೂರು ಸಂಚಾಲಕರಾದ ಕುಮಾರ, ಟಿ. ನರಸೀಪುರ ಸಂಚಾಲಕರಾದ ಪ್ರಶಾಂತ್ ಮಲಿಯೂರು, ನಂಜನಗೂಡು ಸಂಚಾಲಕರಾದ ಗಣೇಸ್ ಅಗನವಾಳು ಮುಂತಾದ ನೂರಾರು ದಸಂಸ ಕಾರ್ಯಕರ್ತರು, ಅಲೆಮಾರಿ ಸಮುದಾಯದ ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮೈಸೂರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಪತ್ರ ಸಲ್ಲಿಸಿದರು.

About The Author