
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂದಿನ ಹುತಾತ್ಮ ಚೌಕದಿಂದ ಆರಂಭಗೊಂಡ ಪ್ರತಿಭಟನೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಮಿನಿ ವಿಧಾನಸೌಧಕ್ಕೆ ತೆರಳಿ ಸಮಾವೇಶಗೊಂಡಿತು.
ರೈತರ ಜಮೀನುಗಳನ್ನು ವಕ್ಪ ಹೆಸರಿನಲ್ಲಿ ದಾಖಲು ಮಾಡುವ ಕಾಂಗ್ರೆಸ್ ಸರಕಾರದ ಕ್ರಮವನ್ನು ಪಕ್ಷ ಸಹಿಸುವುದಿಲ್ಲ. ಕೂಡಲೇ ಸರಕಾರ ವಕ್ಪ ಮಂಡಳಿಯ ಹೆಸರಿನಲ್ಲಿರುವ ರೈತರ ಜಮೀನುಗಳನ್ನು ಮೂಲ ಮಾಲಕರ ಹೆಸರಿನಲ್ಲಿ ದಾಖಲು ಮಾಡಬೇಕು. ೧೯೫೨ ರಲ್ಲಿ ವಕ್ಪ ಮಂಡಳಿ ರಚನೆ ಮಾಡಿದಾಗ ಇಡೀ ದೇಶದಲ್ಲಿ ೧.೨೦ ಲಕ್ಷ ಎಕರೆ ಜಮೀನು ವಕ್ಪ ಹೆಸರಿನಲ್ಲಿ ಇತ್ತು. ಅದರಲ್ಲಿ ಮಸೀದಿ, ದರ್ಗಾ, ಕಬರಸ್ಥಾನ ಹಾಗೂ ಮದರಸಾಗಳ ಆಸ್ತಿಗಳು ಸೇರಿದ್ದವು. ಆದರೆ ಈಗ ೯.೪೦ ಲಕ್ಷ ಎಕರೆ ಜಮೀನು ಹೆಚ್ಚಳವಾಗುವುದು ಹೇಗೆ ಸಾಧ್ಯವೆಂದು ರಾಜ್ಯ ಸರಕಾರ ಹಾಗೂ ವಕ್ಪ ಸಚಿವರನ್ನು ಪ್ರಶ್ನಿಸಿದ ಅವರು, ಹಿಂದುಗಳ ಜಮೀನುಗಳನ್ನು ಕಬಳಿಸಿ, ಅವರ ಮನಸ್ಸಿಗೆ ನೋವುಂಟು ಮಾಡಲು ಹೊರಟಿರುವ ಕಾಂಗ್ರೆಸ್ ಸರಕಾರದ ನಡೆ ಖಂಡನೀಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಕೆ.ವ್ಹಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಮುಸ್ಲಿಂ ಓಲೈಕೆ ನೀತಿಯಿಂದ ರಾಜ್ಯದಲ್ಲಿ ಕೋಮು ಗಲಬೆಗಳು ಉಂಟಾಗುವ ಪರಸ್ಥಿತಿ ಎದುರಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಸರಕಾರ ಹೊತ್ತಿ ಉರಿಯುವಂತೆ ಮಾಡಿದೆ. ಕೂಡಲೇ ರಾಜ್ಯ ಸರಕಾರ ವಕ್ಪ ಹೆಸರಿನಲ್ಲಿ ದಾಖಲು ಮಾಡಿರುವ ಜಮೀನುಗಳನ್ನು ರೈತರ ಹೆಸರಿಗೆ ಬಿಟ್ಟು ಕೊಡಲು ಕ್ರಮ ತೆಗೆದುಕೊಳ್ಳಲು ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಬೇಕು. ಕಾಂಗ್ರೆಸ್ ಸರಕಾರ ಮುಸ್ಲಿಂ ಓಲೈಕೆ ನೀತಿ ಕೈಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಇಲ್ಲವಾದಲ್ಲಿ ರಾಜ್ಯಾಧ್ಯಂತ ಹಿಂದುಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಕೊಪ್ಪದ, ಮಹಿಳಾ ಘಟಕದ ಸುನಿತಾ ತಿಮ್ಮನಗೌಡ್ರ, ಬಿಜೆಪಿ ಮುಖಂಡರಾದ ಪಿ.ಎಫ್. ಪಾಟೀಲ, ಬಿ.ಎಫ್. ಬಸಿಡೋಣಿ, ಜನಕರಡ್ಡಿ ಹಕಾಟಿ, ದ್ಯಾವಪ್ಪ ಬೆಳವಡಿ, ರೇಣಪ್ಪ ಸೋಮಗೊಂಡ, ವಿಜಯ ಗುಡದಾರಿ, ಗಂಗಾಧರ ಬೋಸ್ಲೆ, ಮಲ್ಲಿಕಾರ್ಜುನ ಭಾವಿಕಟ್ಟಿ, ಈರನಗೌಡ ಹೊಸಗೌಡ್ರ, ಸಿ.ಎಸ್. ಹಿರೇಮಠ, ಬಾಬುರಡ್ಡಿ ಹೆಬ್ಬಳ್ಳಿ, ಸಿದ್ದು ಗುಡೆನ್ನವರ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


