ವಿಶ್ವ ಕ್ಷಯರೋಗ ದಿನಾಚರಣೆ ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳ ಸತ್ಕಾರ ಸಮಾರಂಭ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಉದ್ಘಾಟಿಸಿದರು.

WhatsApp Group Join Now

ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳ ಸತ್ಕಾರ ಸಮಾರಂಭವನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಉದ್ಘಾಟಿಸಿ, ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯು 2030 ರ ವೆಳೆಗೆ ಇಡೀ ವಿಶ್ವವನ್ನು ಕ್ಷಯರೋಗದಿಂದ ಮುಕ್ತಗೊಳಿಸುವ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 35 ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತಗೊಳಿಸಲು ಪ್ರಯತ್ನಿಸಿ, ಜಿಲ್ಲೆಯ 35 ಗ್ರಾಮ ಪಂಚಾಯಿತಿಗಳನ್ನು ಕ್ಷಯ ಮುಕ್ತಗೊಳಿಸಿದ್ದು ಸಂತಸ ತಂದಿದೆ. ಜಿಲ್ಲೆಯಲ್ಲಿ ಈಗ 3,323 ಕ್ಷಯ ರೋಗದ ಪಾಸಿಟಿವ್ ಪ್ರಕರಣಗಳಿವೆ. ಇದರಲ್ಲಿ ಅತೀ ಹೆಚ್ಚು ಪ್ರಕರಣಗಳು ಹುಬ್ಬಳ್ಳಿ ಶಹರದಲ್ಲಿ ಕಂಡು ಬಂದಿವೆ. ಇದಕ್ಕೆ ಹೆಚ್ಚು ಜನಸಾಂದ್ರತೆ ಕಾರಣವಿರಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ ಮತ್ತು ನಗರ ಸಂಸ್ಥೆಗಳ ಸಿಬ್ಬಂದಿ, ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಬೇಕು. ವಿವಿಧ ಇಲಾಖೆಗಳ ಸಮನ್ವಯದಿಂದ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿ, ಕ್ಷಯ ಮುಕ್ತ ಜಿಲ್ಲಾಯಾಗಿ ರೂಪಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

2023 ರ ಜನವರಿಯಿಂದ ಡಿಸೆಂಬರ್‍ವರೆಗೆ 2,292 ಜನ ಕ್ಷಯರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1,966 ಜನ ಗುಣಮುಖರಾಗಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಗುಣಮುಖವಾದವರ ದರ ಜಿಲ್ಲೆಯಲ್ಲಿ ಶೇ. 85.7 ರಷ್ಟಿದೆ. ಆರೋಗ್ಯ ಇಲಾಖೆಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಪೂರ್ಣ ಗುರಿ ಸಾಧಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಭರವಸೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಇದಕ್ಕೆ ಮುಂಜಾಗೃತೆ ಅಗತ್ಯವಿದೆ. ಜಿಲ್ಲೆಯ ಎಲ್ಲ 146 ಗ್ರಾಮ ಪಂಚಾಯಿತಿಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯ ಮನೆಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಕ್ಷಯರೋಗದ ತಿಳುವಳಿಕೆ ನೀಡಲಿದ್ದಾರೆ. ಸಂಶಯಾಸ್ಪದ ಪ್ರಕರಣ ಕಂಡು ಬಂದಲ್ಲಿ ಕಫ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತಾರೆ. ಕ್ಷಯರೋಗ ಖಚಿತಪಟ್ಟಲ್ಲಿ ಅವರ ಕುಟುಂಬ ಸದಸ್ಯರಿಗೆ ಜಾಗೃತಿ ಮೂಡಿಸಿ, ಮುಂಜಾಗೃತೆ ಕ್ರಮ ತಿಳಿಸುತ್ತಾರೆ ಎಂದರು.

ಗ್ರಾಮ ಪಂಚಾಯತ ಸದಸ್ಯರು, ಸಿಬ್ಬಂದಿಗಳು ಕ್ಷಯ ಮುಕ್ತ ಗ್ರಾಮ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಿದ್ದಾರೆ. ಜನಜಾಗೃತಿ, ಮನೆ ಮನೆಗೆ ಭೇಟಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕೆಂದು ಅವರು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಸುಜಾತಾ ಹಸವೀಮಠ ಹಾಗೂ ಇತರರು ವೇದಿಕೆಯಲ್ಲಿದ್ದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಅವರು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ರವೀಂದ್ರ ಬೋವೆರ ವಂದಿಸಿದರು. ಜಿಲ್ಲಾ ಶಿಕ್ಷಣ ಆರೋಗ್ಯ ಅಧಿಕಾರಿ ಬಿ.ಆರ್.ಪಾತ್ರೋಟ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಧಾರವಾಡ ತಾಲೂಕು ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ ಸೇರಿದಂತೆ ವಿವಿಧ ಆರೋಗ್ಯ ಯೋಜನೆಗಳ ಕಾರ್ಯಕ್ರಮ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕ್ಷಯ ಮುಕ್ತ ಗ್ರಾಮ ಪಂಚಾಯತಿಗಳು: 2023-24 ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ 35 ಗ್ರಾಮ ಪಂಚಾಯತಿಗಳು ಕ್ಷಯ ಮುಕ್ತ ಗ್ರಾಮ ಪಂಚಾಯತಿಗಳಾಗಿ ಘೋಷಣೆ ಆಗಿವೆ. ಅವುಗಳಲ್ಲಿ ಕುಂದುಗೋಳ ತಾಲೂಕಿನ ಗುಡೇನಕಟ್ಟಿ, ಯಲಿವಾಳ ಮತ್ತು ಧಾರವಾಡ ತಾಲೂಕಿನ ಕಡಬಗಟ್ಟಿ, ಯರಿಕೊಪ್ಪ, ಕೊಟೂರು, ದೇವರಹುಬ್ಬಳ್ಳಿ, ನಿಗದಿ. ಹುಬ್ಬಳ್ಳಿ ತಾಲೂಕಿನ ಛಬ್ಬಿ, ಅಗಡಿ, ಕರಡಿಕೊಪ್ಪ, ವರೂರ, ಉಮಚಗಿ, ಕೋಳಿವಾಡ, ಇಂಗನಹಳ್ಳಿ, ಕಲಘಟಗಿ ತಾಲೂಕಿನ ಮುತ್ತಗಿ, ಗುಡ್ಡದಹುಲಿಕಟ್ಟಿ, ಬಿರವಳ್ಳಿ ಮತ್ತು ಕುಂದಗೋಳ ತಾಲೂಕಿನ ಗೌಡಗೇರಿ, ಮಳಲಿ, ಪಶುಪತಿಹಾಳ, ಯರಿಬೂದಿಹಾಳ, ಚಾಕಲಬ್ಬಿ, ಸಂಶಿ, ಬೆಟದೂರ, ಯರಗುಪ್ಪಿ ಮತ್ತು ನವಲಗುಂದ ತಾಲೂಕಿನ ಬೆಳವಟಗಿ, ಶಿರೂರ, ಶಲವಡಿ, ಅಳಗವಾಡಿ, ಹೆಬ್ಬಾಳ, ಜಾವೂರ, ಮೊರಬ, ಶಿರಕೋಳ, ನಾವಲ್ಲಿ, ನಾಯಕನೂರ ಗ್ರಾಮಗಳು ಸೇರಿವೆ.

ಈ ಎಲ್ಲ ಕ್ಷಯ ಮುಕ್ತ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಅವರು ಪ್ರಮಾಣ ಪತ್ರ, ಸ್ಮರಣಿಕೆ ನೀಡಿ, ಕಾರ್ಯಕ್ರಮದಲ್ಲಿ ಗೌರವಿಸಿದರು.

ಕ್ಷಯ ರೋಗ ಜಾಗೃತಿ ಜಾಥಾ: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದು ಬೆಳಿಗ್ಗೆ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು.

ಜಾಗೃತಿ ಜಾಥಾ ನಡಿಗೆಯು ಡಿಎಚ್‍ಓ ಕಚೇರಿಯಿಂದ ಆರಂಭವಾಗಿ ಹಳೆ ಬಸ್ ನಿಲ್ದಾಣ, ವಿವೇಕಾನಂದ ಸರ್ಕಲ್, ಆಲೂರು ವೆಂಕಟರಾವ್ ವೃತ್ತದ ಮೂಲಕ ಮರಳಿ ಡಿಎಚ್‍ಓ ಕಚೇರಿ ತಲುಪಿತು. ಜಾಥಾ ನಡಿಗೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ನರ್ಸಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author