ಗದಗ್ ಜಿಲ್ಲಾ ನರಗುಂದ ತಾಲೂಕಿನ ಕೊಣ್ಣೂರ ಬಳಿ ಬೂದಿಹಾಳ ಚೆಕ್ ಪೋಸ್ಟ್
ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 182.90 ಕ್ವಿಂಟಲ್ ಪಡಿತರ ಅಕ್ಕಿಯನ್ನು ನರಗುಂದ ಪೊಲೀಸರು ಹಾಗೂ ಆಹಾರ ನಿರೀಕ್ಷರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಯಲಬುರ್ಗಾ ತಾಲ್ಲೂಕಿನ ಪುಟಗಮಮರಿ ನಿರಂಜನಯ್ಯ ಕಂಟಿಬಸಯ್ಯ ನಂದಾಪುರ ಎಂಬ ವ್ಯಕ್ತಿ ಕ್ಯಾಂಟರ್ ವಾಹನದಲ್ಲಿ ಗಜೇಂದ್ರಗಡದಿಂದ ಕೊಣ್ಣೂರ ಮಾರ್ಗವಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿಗೆ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ವಾಹನ ಸಮೇತ ಸಿಕ್ಕಿ ಬಿದ್ದಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಆಹಾರ ನಿರೀಕ್ಷಕ ಅನೀಲ ಪವಾರ, ಪೊಲೀಸರ ಮಾಹಿತಿ ಆಧರಿಸಿ ಬೂದಿಹಾಳ ಚೆಕ್ ಪೋಸ್ಟ್ ಬಳಿ ತೆರಳಿದರು. ಅಲ್ಲಿ ಗಜೇಂದ್ರಗಡದಿಂದ ಕ್ಯಾಂಟರ್ ವಾಹನದಲ್ಲಿ 383 ಚೀಲಗಳಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟವಾಗುತ್ತಿತ್ತು. ಪಡಿತರ ಅಕ್ಕಿ ಯನ್ನು ಪೊಲೀಸರ ಸಮ್ಮುಖದಲ್ಲಿ ವಶಪಡೆಯಲಾಗಿದೆ.
ನಿರಂಜನಯ್ಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನರಗುಂದ ಪೊಲೀಸ್ ಠಾಣೆ ಪಿಎಸ್‌ಐ ಎಫ್.ಎಸ್.ಮಣ್ಣೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ.



