ಧಾರವಾಡ ಲೋಕೋಪಯೋಗಿ ಇಲಾಖೆಯ ಉತ್ತರ ವಲಯ ಮುಖ್ಯ ಇಂಜಿನಿಯರ್ ಮನೆಯ ಮೇಲೆ ಶನಿವಾರ ಲೋಕಾಯುಕ್ತರು ದಾಳಿ ನಡೆದಿದೆ.
ಮುಖ್ಯ ಅಭಿಯಂತರ ಎಚ್.ಸುರೇಶ ಅವರ ಕಚೇರಿ, ಕೆಸಿಡಿ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿರುವ ಸರಕಾರಿ ಮನೆಯ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ತಂಡಗಳು ದಾಳಿ ಮಾಡಿದ್ದು, ಕೋಟ್ಯಾಂತರ ಮೌಲ್ಯದ ಸ್ಥಿರಾಸ್ತಿ ಕಾಗದ ಪತ್ರ, ಚರಾಸ್ತಿ ವಸ್ತುಗಳ ವಶಕ್ಕೆ ಪಡೆಯಲಾಗಿದೆ. ಕರ್ತವ್ಯದಿಂದ ನಿವೃತ್ತಿ ಹಿನ್ನೆಲೆಯಲ್ಲಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿತ್ತಲ್ಲದೇ ಇಲಾಖೆ ಸಿಬ್ಬಂದಿಗಳಿಂದ ಬೀಳ್ಕೊಡುಗೆ ಆಯೋಜಿಸಲಾಗಿತ್ತು. ಇದೇ ಸಮಯಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಾಕ್ ನೀಡಿದ್ದರಿಂದ ಈ ಎಲ್ಲ ಕಾರ್ಯಕ್ರಮಗಳು ರದ್ದಾದವು.
ಮನೆ ಹಾಗೂ ಕಚೇರಿ ಸೇರಿದಂತೆ ವಿವಿಧ ಕಡೆ ನಡೆದ ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ಕಾಗದ ಪತ್ರಗಳ ಪರಿಶೀಲಿಸಲಾಗಿದ್ದು, ಈ ದಾಳಿ ವೇಳೆ ಮನೆಯಲ್ಲಿ 76,600 ರೂ. ನಗದು, 21.58 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2,39,958 ರೂ. ಮೌಲ್ಯದ ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದ್ದು, ಇದಲ್ಲದೇ 13.44 ಲಕ್ಷ ರೂ. ಮೌಲ್ಯದ ಎರಡು ಫ್ಲಾಟ್, 50 ಲಕ್ಷ ರೂ. ಮೌಲ್ಯದ ಆರು ವಾಣಿಜ್ಯ ಮಳಿಗೆಗಳ ಕಾಗದ ಪತ್ರ ದೊರೆತಿದ್ದು, ಇದರೊಂದಿಗೆ 2.60 ಕೋಟಿ ರೂ. ಮೌಲ್ಯದ ಒಂದು ವಾಸದ ಮನೆ ಇರುವುದು ಗೊತ್ತಾಗಿದೆ.
ಫಾರ್ಮ್ ಹೌಸ್, 35.36 ಲಕ್ಷ ಮೌಲ್ಯದ 11 ಎಕರೆ ಕೃಷಿ ಜಮೀನು, 1.65 ಕೋಟಿ ಎಫ್‌ಡಿ ಪತ್ರಗಳು ಸಿಕ್ಕಿವೆ. ಇದಲ್ಲದೇ 26 ಲಕ್ಷ ರೂ. ಮೌಲ್ಯದ ಎರಡು ವಾಹನ, 25 ಲಕ್ಷ ಮೌಲ್ಯದ ಪೀಠೋಪಕರಣಗಳ ವಶಪಡಿಸಿಕೊಂಡಿದ್ದು, ಒಟ್ಟು 3, 31,47,574 ಮೌಲ್ಯ ಹೊಂದಿದ್ದು, ಈ ಹಿನ್ನಲೆಯಲ್ಲಿ ಶೇ.153.54 ರಷ್ಟು ಹೆಚ್ಚಿನ ಆಸ್ತಿ ಗಳಿಕೆಯ ಆರೋಪದಡಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



